ಉಡುಪಿ-ಪುತ್ತೂರು ಶ್ರೀ ಎಲ್.ವಿ.ಟಿ. ದಸರಾ ಸಂಪನ್ನ
ಉಡುಪಿ: ಇಲ್ಲಿನ ವೈಶ್ಯವಾಣಿ ಸಮಾಜದ ಉಡುಪಿ ಸಂತೆಕಟ್ಟೆಯ ಅಂಬಾಗಿಲು ರಾ.ಹೆ. 66ನಲ್ಲಿರುವ ಉಡುಪಿ-ಪುತ್ತೂರು ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ(ಎಲ್.ವಿ.ಟಿ)ದಲ್ಲಿ 30ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಶ್ರೀಶಾರದೋತ್ಸವವು ಅದ್ಧೂರಿಯಾಗಿ ವಿಜ್ರಂಭಣೆಯಿಂದ ಶ್ರೀ ವಾಮನಾಶ್ರಮ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಹಾಗೂ ದೇವಸ್ಥಾನದ ಪ್ರಧಾನ ತಂತ್ರಿ ಶ್ರೀನಿವಾಸ ತಂತ್ರಿಯವರ ಮಾರ್ಗದರ್ಶನ ಮತ್ತು ಪ್ರಧಾನ ಅರ್ಚಕ ಅನಂತ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 30ನೇ ವರ್ಷದ ನವರಾತ್ರಿ ಉತ್ಸವವು ಅ.3 ರಿಂದ ಪ್ರಾರಂಭವಾಗಿ ಅ.12ರಂದು ಸಂಪನ್ನಗೊಂಡಿತು.
ನವರಾತ್ರಿಯಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ , ಸಂಜೆ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ಪೂಜೆ ನೆರವೇರಿತು.
ಅ.9 ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಶಾರದಾ ದೇವಿಯ ಮೂರ್ತಿಯ ಪ್ರತಿಷ್ಠಾಪನೆಯು ನೆರವೇರಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ರಾತ್ರಿ 8:30ಕ್ಕೆ ಮಹಾಪೂಜೆ ನೆರವೇರಿತು.
ಅ.11 ರಂದು ಮಹಾ ನವಮಿ ಪ್ರಯುಕ್ತ ದೇವಳದ ಸನ್ನಿಧಿಯಲ್ಲಿ ಚಂಡಿಕಾಯಾಗ ನೆರವೇರಿತು.
ಅ.12 ರಂದು ವಿಜಯ ದಶಮಿ ಪ್ರಯುಕ್ತ ಬೆಳಿಗ್ಗೆ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸೇವಾ ಕರ್ತರಿಂದ ಅನ್ನಸಂರ್ಪಣೆ ನೆರವೇರಿತು.
ಮಧ್ಯಾಹ್ನ 1 ಗಂಟೆಗೆ ವಿಸರ್ಜನಾ ಪೂಜೆ, ಸಂಜೆ 4 ಗಂಟೆಗೆ ಶೋಭಾಯಾತ್ರೆಯ ಅಂಗವಾಗಿ ಶ್ರೀಶಾರದಾ ದೇವಿಯ ಮೂರ್ತಿಯನ್ನು ವೈಭವದ ಪುರ ಮೆರವಣಿಗೆಯ ಮೂಲಕ ಕಲ್ಯಾಣಪುರ ಸುವರ್ಣ ನದಿಯಲ್ಲಿ ಜಲ ಸ್ತಂಭನ ಮಾಡುವುದರೊಂದಿಗೆ ಉಡುಪಿ-ಪುತ್ತೂರು ಎಲ್.ವಿ.ಟಿ. ದಸರಾ ಮಹೋತ್ಸವವು ಸಂಪನ್ನಗೊಂಡಿತು.







