ಕುಂದಾಪುರ ಶ್ರೀ ಮಹಾಕಾಳಿ ದೇವಳದ ಶರನ್ನವರಾತ್ರಿ ಮಹೋತ್ಸವ ಸಂಪನ್ನ
ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ಅ.3 ರಿಂದ ಆರಂಭಗೊಂಡು 12ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.
ಅ.3 ರಂದು ಸಂಜೆ 6 ಗಂಟೆಯಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನೆ, ರಾತ್ರಿ ಗಂಟೆ 7.30ಕ್ಕೆ ಕಲಶ ಸ್ಥಾಪನೆ, ಪ್ರಾರ್ಥನೆ, ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಿತು.
ಅ.4 -11 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಿತು.
ಅ.5 ರಂದು ಸ್ವಾತಿ ನಕ್ಷತ್ರ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ "ಕದಿರು ಪೂಜೆ" ಹೊಸತು ಆಚರಣೆ ಪ್ರಯುಕ್ತ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಿತು.
ಅ.11 ರಂದು ಬೆಳಿಗ್ಗೆ 8 ಗಂಟೆಗೆ 'ಸಾಮೂಹಿಕ ಚಂಡಿಕಾ ಹೋಮ, 'ಪೂರ್ಣಾಹುತಿ, ಪಲ್ಲಪೂಜೆ, ವಿಶೇಷ ಅಲಂಕಾರ ಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸೇವಾಕರ್ತರಿಂದ ಸಾರ್ವಜನಿಕ "ಮಹಾ ಅನ್ನ ಸಂತರ್ಪಣೆ" ಕಾರ್ಯಕ್ರಮ ನೆರವೇರಿತು.
ಅ.12 ರಂದು ವಿಜಯದಶಮಿ ಪ್ರಯುಕ್ತ ಸಂಜೆ 5.30ರಿಂದ ವಿಶೇಷ "ರಂಗಪೂಜೆ"ರಾತ್ರಿ ಗಂಟೆ 6.30ರ ಗೋಧೂಳಿ ಸುಮುಹೂರ್ತದಲ್ಲಿ ಶ್ರೀ ಮಹಾಕಾಳಿ ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಪುರಮೆರವಣಿಗೆಯು ಕುಂದಾಪುರ ಮುಖ್ಯ ರಸ್ತೆ ಮಾರ್ಗವಾಗಿ ಸಾಗಿ, ಪಾರಿಜಾತ ಸರ್ಕಲ್ ನಿಂದ ತಿರುಗಿ, ಖಾರ್ವಿ-ಮೇಲ್ಕೇರಿ ರಸ್ತೆಯಲ್ಲಿರುವ ಶ್ರೀ ನಾಗಜಟ್ಟಿಗೇಶ್ವರ ದೇವಳಕ್ಕೆ ಹೋಗಿ ಅಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆಯೊಂದಿಗೆ ಶರನ್ನವರಾತ್ರಿ ಮಹೋತ್ಸವವು ಸಂಪನ್ನಗೊಂಡಿತು.


