
ಗ್ರಾ.ಪಂ.ಗಳಿಗೆ ಶಕ್ತಿ ನೀಡಿದ್ದೇ ಕಾಂಗ್ರೆಸ್: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಗ್ರಾಮ ಪಂಚಾಯತ್‌ಗಳಿಗೆ ಶಕ್ತಿ ತಂದುಕೊಟ್ಟಿದ್ದೇ ಕಾಂಗ್ರೆಸ್. ಉದ್ಯೋಗ ಖಾತ್ರಿ, ನರೇಗಾದಂಥ ಹತ್ತಾರು ಯೋಜನೆ ಜಾರಿಗೆ ತರಲಾಗಿದ್ದು, ಪಂಚಾಯತ್‌ನ ಪರಿಕಲ್ಪನೆಯೇ ಕಾಂಗ್ರೆಸಿನದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ದ.ಕ. ಸ್ಥಳೀಯಾಡಳಿತ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಪರ ಪ್ರಚಾರ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಡೆದ ಪಕ್ಷ ಕಾರ‍್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅತಿಯಾದ ವಿಶ್ವಾಸದಿಂದ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ನಮಗೆ ಗ್ಯಾರೆಂಟಿ ಮೇಲೆ ಭರವಸೆ ಇದ್ದು, ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಲು ಕಾಂಗ್ರೆಸ್‌ಗೆ ಗೆಲ್ಲುವ ಅಗತ್ಯ ಇದ್ದು, ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ತಯಾರಿ ಮಾಡಿದ್ದೇವೆ ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಅರಣ್ಯ ಇಲಾಖೆ ಮಂತ್ರಿ ಈಶ್ವರ್ ಖಂಡ್ರೆ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ. ನೀತಿ ಸಂಹಿತೆ ಇರುವುದರಿಂದ ಈಗ ಯಾವುದೇ ಭರವಸೆ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಸರಕಾರ ಕರಾವಳಿಗೆ ಅನ್ಯಾಯ ಮಾಡಿ, ಬಿಡಿಗಾಸು ಅನುದಾನ ನೀಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಕೇಂದ್ರದಿಂದಾಗುವ ಅನ್ಯಾಯದ ಬಗ್ಗೆ ಧ್ವನಿ ಯಾಕೆ ಎತ್ತುತ್ತಿಲ್ಲ? ರಾಜ್ಯದ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಬಿಜೆಪಿಯವರಿಗೆ ತಲೆ ಇಲ್ವಾ? ದಾರಿ ತಪ್ಪಿಸಿ ಗೂಬೆ ಕೂರಿಸುವ ಕೆಲಸ ಬಿಡಿ, ಬಿಜೆಪಿಗೆ ಆಪಾದನೆ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ಮುಡಾ ರಾಜಕೀಯ ಪ್ರೇರಿತ ರೈಡ್:
ಮೂಡ ಹಗರಣದ ದಾಖಲೆ ಸುಟ್ಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಯಾಡಿದ ಸಚಿವೆ ಹೆಬ್ಬಾಳ್ಕರ್, ಶೋಭಾ ಕರಂದ್ಲಾಜೆ ಬಗ್ಗೆ ಮಹಿಳೆಯಾಗಿ ವೈಯಕ್ತಿಕ ಗೌರವ ಇದೆ. ಶೋಭಾ ಯಾವಾಗಲೂ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ. ಮುಡಾ ಮೇಲೆ ರಾಜಕೀಯ ಪ್ರೇರಿತ ಇ.ಡಿ. ರೈಡ್ ನಡೆಯುತ್ತಿದೆ. ರಾಜಭವನ, ರಾಜ್ಯಪಾಲರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಕಾರಾತ್ಮಕ ಸ್ಪಂದನ:
ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಬಗ್ಗೆ ಸಿಎಂ ಜೊತೆ ಮಾತುಕತೆಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದಲ್ಲಿ ಮೂರು ಉಪಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಸಭೆಯಲ್ಲಿ ನಡೆದ ವಿಚಾರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.