ಮುಸ್ಲಿಂ ಒಕ್ಕೂಟದ ಪ್ರಶಸ್ತಿಗಳಿಗೆ ಮೂವರು ಆಯ್ಕೆ

ಮುಸ್ಲಿಂ ಒಕ್ಕೂಟದ ಪ್ರಶಸ್ತಿಗಳಿಗೆ ಮೂವರು ಆಯ್ಕೆ


ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರತೀ ಎರಡು ವರ್ಷಗಳಿಗೊಮ್ಮೆ, ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿದವರಿಗಾಗಿ ’ಮಾನವ ರತ್ನ’ ಮತ್ತು ತಮ್ಮ ಸಂಪತ್ತಿನ ದೊಡ್ಡ ಭಾಗವನ್ನು ಸಮಾಜದ ಕಲ್ಯಾಣಕ್ಕಾಗಿ ಮೀಸಲಿಟ್ಟವರಿಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ವರ್ಷದಿಂದ ಸೌಹಾರ್ದತೆಗಾಗಿ ಶ್ರಮಿಸಿದವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಒಕ್ಕೂಟದ ಪ್ರ.ಕಾರ್ಯದರ್ಶಿ ಇದ್ರೀಸ್ ಹೂಡೆ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನ.10ರಂದು ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಸಂಸದ ಸಸಿಕಾಂತ್ ಸೆಂಥಿಲ್, ‘ಸೇವಾ ರತ್ನ’ ಪ್ರಶಸ್ತಿಗೆ ಮೂಲತಃ ಕಾರ್ಕಳದವರಾಗಿದ್ದು, ದುಬೈಯಲ್ಲಿ ಉದ್ಯಮಿಯಾಗಿರುವ ಕೆ.ಎಸ್. ನಿಸಾರ್ ಅಹ್ಮದ್, ಮತ್ತು ಚೊಚ್ಚಲ ’ಸೌಹಾರ್ದ ರತ್ನ’ ಪ್ರಶಸ್ತಿಯನ್ನು ಕ್ರೈಸ್ತ ಧರ್ಮಗುರು ಫಾ| ವಿಲಿಯಮ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಡಾ. ಗಣನಾಥ ಎಕ್ಕಾರು,  ಉಡುಪಿ ಜಿ.ಪಂ ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ, ರಾಜ್ಯ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪ ನಕ್ರೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೋಡಿ ಅವರನ್ನು ಸನ್ಮಾನಿಸಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಯೇನಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ಲಾ ಕುಂಞ ಸಮಾವೇಶ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅಭಿನಂದನಾ ಭಾಷಣ ನಿರ್ವಹಿಸಲಿದ್ದಾರೆ. ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಶರ್ಫುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ವಿನಯ ಕುಮಾರ್ ಸೊರಕೆ, ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಕರ್ನಾಟಕ ಆಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ.ಇಫ್ತಿಖಾರ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉದ್ಯಮಿ ಅಪ್ರೋಝ್ ಅಸ್ಸಾದಿ ದುಬೈ, ಸಹಬಾಳ್ವೆ ಅಧ್ಯಕ್ಷ ಕೆ. ಫಣಿರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಗ್ರೇಸಿ ಕುಯೆಲೋ, ಕುಂದಾಪುರದ ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಫಿರ್ದೌಸ್ ಉಪಸ್ಥಿತರಿರುವರು ಎಂದು ಇದ್ರಿಸ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಶೇಖ್ ಸಯ್ಯದ್ ಫರೀದ್, ಇಸ್ಮಾಯಿಲ್, ಸಲಾಹುದ್ದೀನ್ ಅಬ್ದುಲ್ಲಾ, ಟಿ.ಎಮ್ ಗಫ್ರುಲಾ, ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article