ಉಚ್ಚಿಲ ದಸರಾದಲ್ಲಿ ದಾಂಡಿಯಾ, ಗರ್ಬಾ ನೃತ್ಯ
Monday, October 7, 2024
ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಮತ್ತು ಭಕ್ತಾಭಿಮಾನಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾದಲ್ಲಿ ದಾಂಡಿಯಾ ಮತ್ತು ಗರ್ಬಾ ನೃತ್ಯ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರದ ರಥಬೀದಿಯಲ್ಲಿ ಸುಮಧುರ ಸಂಗೀತದೊಂದಿಗೆ ನಡೆದ ಗರ್ಬಾ ಮತ್ತು ದಾಂಡಿಯಾ ನೃತ್ಯ ಜನಾಕರ್ಷಣೆಗೆ ಕಾರಣವಾಗಿದ್ದು, ಅನೇಕ ಉತ್ಸಾಹಿ ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲರೂ ಗರ್ಬಾ ಮತ್ತು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಕೆ.ವಿ. ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಅಮೀನ್, ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.