
ಎನ್‌ಇಪಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು: ಪ್ರೊ. ರಾಮ್ ರಾಮಸ್ವಾಮಿ
ಉಡುಪಿ: ಮೂವತ್ತು ವರ್ಷಗಳ ಬಳಿಕ ಶಿಕ್ಷಣ ನೀತಿ ಬದಲಾಗಿದೆ. ಅದು ಅಗತ್ಯವಾಗಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಮಾಡಿರುವ ಬದಲಾವಣೆಗಳು ಅರ್ಥಹೀನ. ಆ ನೀತಿಯಲ್ಲಿ ಹಲವಾರು ಮಿತಿಗಳಿವೆ ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವತಿಯಿಂದ ನಗರದ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ‘ಟೀಚರ್’ ಶೈಕ್ಷಣಿಕ ಹಬ್ಬದಲ್ಲಿ ಮಾತನಾಡಿದರು.
ಎನ್‌ಇಪಿಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಲಾಗಿದೆ. ಅದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗಲಿದೆ. ಮತ್ತು ಅದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚಲಿದೆ ಎಂದವರು ಅಪ್ರಾಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಔಷಧ, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯಿಂದಾಗಿ ನಮ್ಮ ಜೀವಿತಾವಧಿ ಹೆಚ್ಚಾಗಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳಿಲ್ಲ. ಈಗಲೂ ನಮ್ಮ ದೇಶದಲ್ಲಿ ಶೇ. 25ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕು ಎಂದರು.
ದೇಶದ ಜಿಡಿಪಿಯಲ್ಲಿ ಶೇ. 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಠಾರಿ ಆಯೋಗ ಶಿಫಾರಸು ಮಾಡಿತ್ತು. ಆದರೆ, ನಮ್ಮ ಸರ್ಕಾರಗಳು ಶೇ. 3ರಷ್ಟು ಕೂಡಾ ಮೀಸಲಿರಿಸದ್ದು ದುರಂತ ಎಂದರು.
ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 10 ವರ್ಷಗಳ ಅವಧಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ನಿರ್ನಾಮದಂಚಿಗೆ ತಲುಪಿವೆ. ಈ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಜೊತೆಗೆ ಸರ್ಕಾರಗಳು ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಿವೆ ಎಂದರು.
ಇನ್ನು ಉನ್ನತ ಶಿಕ್ಷಣ ವಿಷಯಕ್ಕೆ ಬಂದರೆ ವಿಶ್ವವಿದ್ಯಾಲಯಗಳು ತಮ್ಮ ಅಧಿಕಾರಗಳನ್ನು ಕಳೆದುಕೊಂಡಿವೆ. ಕುಲಪತಿಗಳು ಸಚಿವರ ಗುಲಾಮರಾಗಿ ಬದಲಾಗಿದ್ದಾರೆ. ಅಲ್ಲದೆ, ಭ್ರಷ್ಟಾಚಾರವೂ ತಾಂಡವವಾಡುತ್ತಿದೆ ಎಂದರು.
ಸಮಿತಿ ಕೋಶಾಧಿಕಾರಿ ಪ್ರೊ. ಕಮಲ್ ಲೊಡಾಯ ಅಧ್ಯಕ್ಷತೆ ವಹಿಸಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಪಿ.ವಿ. ಭಂಡಾರಿ ಸ್ವಾಗತಿಸಿದರು. ಶುಭಂಕರ್ ಚಕ್ರವರ್ತಿ, ಪ್ರಶಾಂತ್ ಬಾಬು, ಉದಯ್ ಗಾಂವಕರ್, ಅಭಿಲಾಷಾ, ಸಂತೋಷ್ ನಾಯಕ್ ಪಟ್ಲ ಉಪಸ್ಥಿತರಿದ್ದರು.