ದುಶ್ಚಟದಿಂದ ವ್ಯಕ್ತಿತ್ವ ನಾಶ: ಡಾ. ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ದುಶ್ಚಟ ಮನುಷ್ಯನ ಪಂಚೇಂದ್ರಿಯಗಳ ಮೂಲಕ ಸ್ಪರ್ಶೇಂದ್ರಿಯಕ್ಕೆ ಅಂಟಿಕೊಳ್ಳುತ್ತದೆ. ಚಟಗಳು ಕೆಟ್ಟ ಕರ್ಮಗಳಿಗೆ, ಹೀನ ಕೆಲಸವನ್ನು ಮಾಡಲು ಪ್ರಚೋದಿಸುತ್ತದೆ. ಇದು ವ್ಯಕ್ತಿತ್ವದ ನಾಶಕ್ಕೆ ಕಾರಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ, ಲಾಯಿಲ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಸಹಯೋಗದಿಂದ ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯಲ್ಲಿ ಅ.4 ರಿಂದ 11ರ ವರೆಗೆ ನಡೆಯಲಿರುವ 1867ನೇ ಮದ್ಯವರ್ಜನ ಶಿಬಿರದಲ್ಲಿ ಅ.8 ರಂದು ಭೇಟಿ ನೀಡಿ ಆಶೀರ್ವದಿಸಿದರು.
ಮನೆಯಲ್ಲಿ ಹೆತ್ತವರು ದುಶ್ಚಟಕ್ಕೆ ತುತ್ತಾದರೆ ಅದುವೇ ಕುಟುಂಬಕ್ಕೆ ಶಾಪವಾಗಿ ಪರಿಣಮಿಸುತ್ತದೆ. ಜೀವನದಲ್ಲಿ ಪರಿವರ್ತನೆ ಎಂಬುದು ಜಗದ ನಿಯಮ. ಹಾಗಾಗಿ ದುಶ್ಚಟಕ್ಕೆ ತುತ್ತಾದವರು ಶಿಬಿರದ ಮೂಲಕ ನವಜೀವನ ಕಂಡುಕೊಳ್ಳುತ್ತಾರೆ. ಚುಚ್ಚುಮದ್ದಿಲ್ಲದೆ, ಆಣೆ ಮಾಡಿಸದೆ ಶಿಬಿರದ ಮೂಲಕ ಮನಸ್ಸಿನ ಪರಿವರ್ತನೆ ಮಾಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಮನಸ್ಸು ಚಂಚಲಗೊಳಿಸದೆ ಮುಂದುವರೆಯಿರಿ. ಇದರ ಫಲ ಕುಟುಂಬಕ್ಕೆ, ಸಮಾಜಕ್ಕೆ ಸಿಗಲಿ ಎಂದು ಹರಸಿದರು.
ಶ್ರೀ ಕ್ಷೇ.ಧ.ಗ್ರಾ.ಯೋ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಜತ್ತನ್ನ ಗೌಡ, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ವೇದಿಕೆ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಶಾರದಾ ಆರ್.ರೈ, ವೆಂಕಟರಾಯ ಅಡೂರು, ಬೆಳ್ತಂಗಡಿ ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಂ ಆರ್., ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಯು.ಸಿ.ಪೌಲೋಸ್ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ದೇವಿಪ್ರಸಾದ್, ವ್ಯಸನ ಮುಕ್ತರಾದ ಆದಂಖಾನ್, ಗಣೇಶ್ ಗೌಡ ಅನಿಸಿಕೆ ವ್ಯಕ್ತಪಡಿಸಿದರು. 76 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಅಧ್ಯಕ್ಷತೆ ವಹಿಸಿದ್ದ ಬೆಳಾಲು 1867ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ಕುಮಾರ್
ವಂದಿಸಿ, ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.