ಕಿಂಡಿ ಅಣೆಕಟ್ಟುಗಳಿಗೆ ತಕ್ಷಣ ಹಲಗೆ ಅಳವಡಿಸಲು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹ

ಕಿಂಡಿ ಅಣೆಕಟ್ಟುಗಳಿಗೆ ತಕ್ಷಣ ಹಲಗೆ ಅಳವಡಿಸಲು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹ

ನದಿಯ ಸಿಹಿ ನೀರು ಸಮುದ್ರ ಪಾಲಾಗುವುದನ್ನು ತಪ್ಪಿಸಿ, ಕೃಷಿಗೆ ಒದಗಿಸಲು ಸೂಚನೆ

ಕುಂದಾಪುರ: ಮಳೆ ಕಡಿಮೆಯಾಗಿ 10-15 ದಿನ ಕಳೆದರೂ ಇನ್ನೂ  ಬೈಂದೂರು ಪ್ರದೇಶಗಳ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸದೇ ಇರುವುದರಿಂದ ನದಿ, ಉಪನದಿಗಳ ನೀರು ಸಮುದ್ರ ಸೇರುತ್ತಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ  ಆಗ್ರಹಿಸಿದ್ದಾರೆ.

ಈ ಬಾರಿ ಚೆನ್ನಾಗಿ‌ ಮಳೆಯಾಗಿದ್ದರೂ ನೀರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಕಷ್ಟವಾಗುತ್ತದೆ. ಇನ್ನು ಕೆಲವು ಗ್ರಾಮಗಳಿಗೆ ನೀರಿನ ಅವಶ್ಯಕತೆಯೂ ಹೆಚ್ಚಿದೆ. ಹೀಗಾಗಿ ಸಂಬಂಧಪಟ್ಟವರು ಎಚ್ಚರಿಕೆಯಿಂದ ಈ ಕಾರ್ಯ ಮಾಡಬೇಕು.

ಕೃಷಿ ಚಟುವಟಿಕೆಗಳಿಗೆ ಪೂರಕವಾದ ನೀರು ಸಮುದ್ರ ಸೇರುವುದನ್ನು ತಪ್ಪಿಸಬೇಕು. ನದಿ, ಉಪನದಿಗಳ ಸಿಹಿ ನೀರಿಗೆ ಉಪ್ಪು ನೀರು ಸೇರುವುದು ಹಾಗೂ ನದಿ ನೀರು ಸಮುದ್ರ ಸೇರುವುದನ್ನು ತಡೆಯಲು ಮತ್ತು ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳು, ಕಿಂಡಿ ಅಣೆಕಟ್ಟು ಸಹಿತ ಸೇತುವೆ  ನಿರ್ಮಾಣ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಹೀಗೆ ವಿವಿಧ ಇಲಾಖೆಗಳಿಂದ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುಗಳಿಗೆ ತಕ್ಷಣವೇ ಹಲಗೆ ಅಳವಡಿಸಿ ಸಿಹಿ ನೀರು ಸಂಗ್ರಹಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಮುಂದಾಗಬೇಕು ಎಂದು ಶಾಸಕ ಗುರುರಾಜ್ ಗಂಟೆಹೊಳೆ ಆಗ್ರಹಿಸಿದ್ದಾರೆ.

ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕದೆ ಇರುವುದರಿಂದ ಅಂತರ್ಜಲದ ಮೇಲೂ ಪರಿಣಾಮ ಬೀರಲಿದೆ. ಕೃಷಿಗೆ ನೀರಿನ ಕೊರತೆಯ ಭೀತಿಯೂ ಇದೆ.  ಹಾಗೆಯೇ ನದಿಯೊಳಗೆ ಉಪ್ಪು ನೀರು ಸರಾಗವಾಗಿ ಹರಿಯುವುದರಿಂದ ನದಿ ಪಾತ್ರದ ನಿವಾಸಿಗಳ ಬಾವಿಯ ನೀರು ಕೂಡ ಉಪ್ಪಾಗುವ ಸಾಧ್ಯತೆ ಇದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಕ್ಷೇತ್ರದ ಕೃಷಿಗೆ ಅನುಕೂಲ ಆಗುವಂತೆ ತಕ್ಷಣವೇ ತಾಲೂಕು ಆಡಳಿತ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೂ ಹಲಗೆ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಿರ್ವಹಣೆ ಅಗತ್ಯ:

ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರಾಡಳಿತ ಸಂಸ್ಥೆಗಳು ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಇರುವ ಕಿಂಡಿ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕದೆ ಇರುವುದು ಅಥವಾ ಸಂಬಂಧಪಟ್ಟವರು ನಿರ್ವಹಣೆ ಮಾಡದೇ ಇರುವುದು ಕಂಡು ಬಂದಲ್ಲಿ ನನಗೆ ಅಥವಾ ನನ್ನ ಕಚೇರಿ ಗಮನಕ್ಕೆ ತರಬಹುದು  ಎಂದು ಶಾಸಕ ಗುರುರಾಜ್  ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article