ಸಾಸ್ತಾನ ಟೋಲ್ ಕಿರಿಕಿರಿ: ಜಾಗೃತಿ ಸಮಿತಿ, ಸಾರ್ವಜನಿಕರಿಂದ ಭಾರೀ ಪ್ರತಿಭಟನೆ

ಸಾಸ್ತಾನ ಟೋಲ್ ಕಿರಿಕಿರಿ: ಜಾಗೃತಿ ಸಮಿತಿ, ಸಾರ್ವಜನಿಕರಿಂದ ಭಾರೀ ಪ್ರತಿಭಟನೆ


ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಸಮಸ್ಯೆಗಳು ಹಾಗೂ ಸ್ಥಳೀಯರಿಗೆ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಸಾಸ್ತಾನ ಟೋಲ್ ಗೇಟ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಸಾಸ್ತಾನ ಟೋಲ್ ಬಳಿ ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷರಾದ ಶ್ಯಾಮ ಸುಂದರ ನಾಯರಿ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ಕಮರ್ಷಿಯಲ್ ವಾಹನಗಳಿಗೆ ಟೋಲ್ ಸಂಗ್ರಹ ಮಾಡದಂತೆ ಸ್ಪಷ್ಟ ಸೂಚನೆಯನ್ನು ನೀಡಲಾಗಿತ್ತು. ಸ್ಥಳೀಯ ಶಾಲೆಯ ವಾಹನಗಳಿಗೆ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ಮೂಲಕ ಪುನಃ ಸಮಸ್ಯೆಗಳನ್ನು ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿದ್ದು ಅದನ್ನು ರಿಪೇರಿ ಮಾಡಿಲ್ಲ. ಬೀದಿ ದೀಪಗಳು ಕೂಡ ಉರಿಯದ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ರೀತಿಯ ಸ್ಪಂದನೆ ಟೋಲ್ ಅಧಿಕಾರಿಗಳಿಂದ ಲಭಿಸುತ್ತಿಲ್ಲ.

ಪಾದಾಚಾರಿಗಳು ಸಂಚರಿಸುವ ರಸ್ತೆಗಳಲ್ಲಿ ಕೂಡ ಹೊಂಡಬಿದ್ದು ಸಮಸ್ಯೆಗಳು ಉಂಟಾಗಿದ್ದು, ಎಕ್ಸ್‌ಪ್ರೆಸ್ ವೇಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಡ್ಡಾಯಾಗಿದ್ದರೂ ಕೂಡ ಅದಕ್ಕೂ ಸ್ಪಂದನೆ ನೀಡುತ್ತಿಲ್ಲ. ಟೋಲ್ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಪ್ರತಿಬಾರಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಒದಗಿದೆ ಎಂದರು.

ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮಾತನಾಡಿ, ಟೋಲ್ ಗುತ್ತಿಗೆಯನ್ನು ಇಂಗ್ಲೆಂಡ್ ಮೂಲದ ಕೆಕೆಆರ್ ಎಂಬ ಕಂಪೆನಿ ವಹಿಸಿಕೊಂಡಿದ್ದು ಸ್ಥಳೀಯರ ಸಮಸ್ಯೆಗಳ ಕುರಿತು ಮಾತನಾಡಿದರೆ ಯಾವುದೇ ರೀತಿಯಲ್ಲಿ ಕ್ಯಾರೇ ಅನ್ನುತ್ತಿಲ್ಲ. ಸಾಸ್ತಾನಕ್ಕೆ ಈ ಟೋಲ್ 2016ರಿಂದ ಒಕ್ಕರಿಸಿದ್ದು, ಪ್ರತಿ ವಿಚಾರಕ್ಕೂ ಇಲ್ಲಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಒದಗಿದೆ.

ಸ್ಥಳಕ್ಕೆ ಟೋಲ್ ಅಧಿಕಾರಿಗಳು ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ ಮೇರೆಗೆ ಟೋಲ್ ಸಿಬಂದಿಗಳು ಆಗಮಿಸಿದ್ದು ಹಿರಿಯ ಅಧಿಕಾರಿಗಳು ಬರದಿದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ಬಳಿಕ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಅವರು ಟೋಲ್ ಹಿರಿಯ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಸೋಮವಾರ ನ.11 ರಂದು ಬ್ರಹ್ಮಾವರದಲ್ಲಿ ಟೋಲ್‌ನ ಹಿರಿಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.

ಪ್ರತಿಭಟನೆಯಲ್ಲಿ ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ. ಸುನೀಲ್ ಡಿಸಿಲ್ವಾ, ಸೀರಿಯನ್ ಚರ್ಚಿನ ಧರ್ಮಗುರು ವಂ. ಡೇವಿಡ್ ಕ್ರಾಸ್ತಾ, ಹೋರಾಟ ಸಮಿತಿಯ ಪ್ರಮುಖರಾದ ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ಡೆನಿಸ್ ಡಿಸೋಜಾ, ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್, ವಾಹನ ಚಾಲಕರು ಮತ್ತು ಮ್ಹಾಲಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article