ಮತೀಯ ಶಕ್ತಿಗಳನ್ನು ಹತ್ತಿಕ್ಕಿ ಶಾಂತಿಯ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು: ಡಾ. ಪರಮೇಶ್ವರ್
ಮಂಗಳೂರು: ಮುಂಬೈ ಮಹಾನಗರಕ್ಕೆ ಸಮಾನವಾಗಿ ಬೆಳೆಯುವ ಎಲ್ಲ ಅರ್ಹತೆ ದ.ಕ. ಜಿಲ್ಲೆಗೆ ಇದೆ. ಆದರೆ ಅದಕ್ಕೆ ತೊಡಕಾಗಿರುವ ಮತೀಯ ಶಕ್ತಿಗಳನ್ನು ಹತ್ತಿಕ್ಕಿ ಶಾಂತಿಯ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಗೃಹ ಸಚಿವ ಡಾ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ನಗರದ ಪೊಲೀಸ್ ಲೇನ್ನಲ್ಲಿ ಶನಿವಾರ ಮಂಗಳೂರು ನಗರ ಹಾಗೂ ಬೆಳ್ಳಾರೆ ಪೊಲೀಸ್ ನೂತನ ವಸತಿ ಗೃಹ ಸಮುಚ್ಛಯ ಮತ್ತು ಸುಬ್ರಹ್ಮಣ್ಯ ಹಾಗೂ ಪಾಣೆಮಂಗಳೂರು ಸಂಚಾರಿ ಪೊಲೀಸ್ ಠಾಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗೃಹ ಸಚಿವನಾಗಿ ನಾನು ಅಧಿಕಾರ ಸ್ವೀಕರಿಸಿ ಪ್ರಥಮ ಭೇಟಿ ನೀಡಿದ ಜಿಲ್ಲೆ ದಕ್ಷಿಣ ಕನ್ನಡ. ಆ ಸಂದರ್ಭ ಇಲ್ಲಿನ ವಿವಿಧ ವೃತ್ತಿಪರರರು, ಕೈಗಾರಿಕೋದ್ಯಮಿಗಳು, ಇಲ್ಲಿ ಸಾಕಷ್ಟುಶಿಕ್ಷಣ ಸಂಸ್ಥೆಗಳಿದ್ದರೂ ಇಲ್ಲಿನ ಮಕ್ಕಳು ಬೇರೆ ಕಡೆ ಹೋಗುತ್ತಿರುವ ಬಗ್ಗೆ, ಹೂಡಿಕೆಗೆ ಹೊರಗಿನವರು ಆಸಕ್ತಿ ತೋರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯರ ಜತೆ ಕಾಫಿ ಕುಡಿಯಲು ಹೋಗುವುದು ತಪ್ಪು ಎನ್ನುವ ಪರಿಸ್ಥಿತಿ ಇತ್ತು. ಹಾಗಾಗಿ ಇಲ್ಲಿನ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಕಮ್ಯೂನಲ್ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೆ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಶೇ. 50ರಷ್ಟು ಕೋಮು ಸಂಘರ್ಷಗಳನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇಲ್ಲಿ ಶಾಂತಿಯಿಂದ ಜನತೆ ಬದುಕುವ ವಾತಾವರಣ ನಿರ್ಮಾಣ ಆಗಬೇಕು ಎಂದರು.
ನಾನು ಚುನಾವಣಾ ಪ್ರಣಾಳಿಕೆ ಮಾಡುವ ಸಂದರ್ಭ ದ.ಕ. ಜಿಲ್ಲೆಯಲ್ಲಿ ಗೋಲ್ಡ್ ಆಂಡ್ ಡೈಮಂಡ್ ಸೆಝ್ ಮಾಡಬೇಕು ಎಂದು ಹೇಳಿದ್ದೆ. ಅದನ್ನು ಕಾರ್ಯರೂ ಪಕ್ಕೆ ತರುವ ಬಗ್ಗೆ ಪ್ರಯತ್ನ ನಡೆಸಬೇಕಾಗಿದೆ. ಅದು ಅನುಷ್ಠಾನಗೊಂಡರೆ, ಜನತೆ ಚಿನ್ನ ಖರೀದಿಗೆ ದುಬೈಗೆ ಹೋಗಬೇಕಾಗಿಲ್ಲ ಎಂದರು.
ಜನಸ್ನೇಹಿ ಪೊಲೀಸ್ ಠಾಣೆಗಾಗಿ ತಲಾ 1 ಲಕ್ಷ ರೂ. ಜನರು ಪೊಲೀಸ್ ಠಾಣೆಗೆ ಬರುವವರನ್ನೆಲ್ಲಾ ಕಳ್ಳನೆಂದು ತಿಳಿಯುವ ಮನಸ್ಥಿತಿ ಬದಲಾಗಬೇಕು. ಜನಸ್ನೇಹಿ ಪೊಲಿ ಸ್ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬರುವವರಿಗೆ ಚಹಾ ಕಾಫಿ ಸೇರಿದಂತೆ ಆದರದ ವ್ಯವಸ್ಥೆಗೆ ತಲಾ 1 ಲಕ್ಷ ರೂ. ಈ ಹಿಂದೆ ನೀಡಲಾಗುತ್ತಿತ್ತು. ಅದನ್ನು ನಿಲಿ ಸಲಾಗಿದೆ ಎಂದು ಹೇಳಲಾಗಿದೆ. ಅದನ್ನು ಮತ್ತೆ ಮುಂದುವರಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಪೊಲೀಸರು ಸಮಾಜ ಚೆನ್ನಾಗಿರಬೇಕೆಂಬ ಆಶಯದೊಂದಿಗೆ ದಿನದ 24 ಗಂಟೆ ದುಡಿಯುತ್ತಾರೆ. ಸಮಾಜ ಅದನ್ನು ಗುರುತಿಸಬೇಕು ತಪ್ಪಾದಾಗ ಸುಲಭವಾಗಿ ಪೊಲೀಸ್ ವೈಫಲ್ಯ ಎನ್ನುವಂತೆ ಅವರ ಬದುಕಿಗೂ ನಾವು ಸಹಕಾರಿಯಾಗಬೇಕು ಎಂಬ ನಿಟ್ಟಿನಲ್ಲಿ ಮೊದಲ ಬಾರಿ ಸಚಿವನಾಗಿದ್ದಾಗ 2015ರಲ್ಲಿ ಪೊಲೀಸ್ ಕಾಲನಿಗೆ ಭೇಟಿ ನೀಡಿದ್ದಾಗ ಅಲ್ಲಿನ ಕೆಟ್ಟ ಪರಿಸ್ಥಿತಿ ಕಂಡು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ತಿಳಿಸಿದ್ದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಓಣಿಗಳಲ್ಲಿ ಜೀವನ ಮಾಡಲು ಅಸಾಧ್ಯವಾಗಿದ್ದು, ಅನುದಾನ ಒದಗಿಸುವಂತೆ ಕೋರಿಆಗ ಅವರು ಒಪ್ಪಿದ್ದರು. ಅದರಂತೆ ಪೊಲೀಸರಿಗೆ ಕ್ವಾರ್ಟಸ್ಗಳ ನಿರ್ಮಾಣ ಕಾರ್ಯ ನಡೆದಿದ್ದು, ದೇಶದ ಯಾವುದೇ ರಾಜ್ಯದಲ್ಲಿ ಈರೀತಿಯ ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ ಮನೆ ಕಟ್ಟಿರುವುದು ನೋಡಿಲ್ಲ. ಹಿಂದೆ ಸುಮಾರು 17 ಲಕ್ಷ ರೂ.ಗಳಿದ್ದ ಘಟಕ ವೆಚ್ಚ ಇದೀಗ 27 ಲಕ್ಷ ರೂ.ಗಳಾಗಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದು, ಶೇ. 45ರಷ್ಟು ಪೊಲೀಸರಿಗೆ ಕ್ವಾರ್ಟಸ್ ನೀಡುವ ಕಾರ್ಯ ಆಗಿದೆ. ಎಲ್ಲರಿಗೂ ಕ್ವಾರ್ಟಸ್ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಇಲಾಖೆಗೆ ಬಂದೂಕು ಬೇಡ, ಆದರೆ ಮನೆ ನಿರ್ಮಾಣಕ್ಕೆ 5000 ಕೋಟಿರೂ. ಒದಗಿಸಿ ಎಂಬ ಬೇಡಿಕೆ ಇಟ್ಟಿರುವುದಾಗಿ ಡಾ.ಪರಮೇಶ್ವರ್ ಹೇಳಿದರು.
ಈ ಬಾರಿ ರಾಜ್ಯದಲ್ಲಿ 1600 ಗೃಹಗಳ ನಿರ್ಮಾಣವಾಗಿದ್ದು, ಇದಕ್ಕಾಗಿ 500 ಕೋಟಿ ರೂ. ನೀಡಲಾಗಿದ್ದು, ಮುಂದಿನ ವರ್ಷವೂ ಸಾವಿರ ಕೋಟಿ ನೀಡುತ್ತೇವೆ. ದ.ಕ. ಜಿಲ್ಲೆಯಲ್ಲಿ ೬ ಕೋಟಿರೂ. ವೆಚ್ಚದ ಪೊಲೀಸ್ ಕಟ್ಟಡ ಉದ್ಘಾಟನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿಯೇ ಕರ್ನಾಟಕ ಪೊಲೀಸರು ಬೆಸ್ಟ್. ಆಧುನಿಕ ತಂತ್ರಜ್ಞಾನ ಇಲಾಖೆಯನ್ನು ಮತ್ತಷ್ಟುಸದೃಢಗೊಳಿಸಿದೆ. ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಆಧುನಿಕ ಜಗತ್ತಿಗೆ ತಕ್ಕಂತೆ ಇಲಾಖೆ ಬೆಳೆದಿದೆ. ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಚಾಲಿತ ಕ್ಯಾಮರಾಗಳ ಮೂಲಕ ತನಿಖೆ ನಡೆಸಲಾಗುತ್ತಿದೆ. ಇದರಿಂದ ಪೊಲೀಸರು ಸ್ಮಾರ್ಚ್ ಆಗಿಸಿದೆ ಎಂದು ಹೇಳಿದ ಸಚಿವರು, ಕಾರ್ಯಕ್ರಮ ನಿರೂಪಣೆ ಮಾಡಿದ ಪೊಲೀಸ್ ಸಿಬ್ಬಂದಿ ವಿವೇಕ್ರನ್ನು ಪ್ರಶಂಸಿಸಿದರು.
ಪೊಲೀಸರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಐಪಿಎಸ್, ಐಎಎಸ್ ಸೇರಿದಂತೆ ಉನ್ನತ ಸ್ಥಾನಕ್ಕೇರಿಸುವಂತೆ ಕರೆ ನೀಡಿದ ಸಚಿವ ಡಾ. ಪರಮೇಶ್ವರ್, ಈ ಬಗ್ಗೆ ಪೋಷಕರು ಸಂಕಲ್ಪ ಮಾಡಬೇಕೆಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಡ್ರಗ್ಸ್ ಮತ್ತು ಟ್ರಾಫಿಕ್ ನಿಯಂತ್ರಣ ಮಂಗಳೂರಲ್ಲಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಪೊಲೀಸರ ವಸತಿಗೃಹ ಶಾಸಕರ ಭವನಕ್ಕೆ ಸರಿಸಟಿಯಾಗಿದೆ ಎಂದು ಶ್ಲಾಘಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಲ್ಲಿ ಮಹಿಳಾ ಪೊಲೀಸ್ ಠಾಣೆಗೆ 9 ಸೆಂಟ್ಸ್ ಜಾಗ ಮೀಸಲಿರಿಸಲಾಗಿದೆ. ಅದಕ್ಕೆ ಅನುದಾನ ಬೇಕಾಗಿದೆ. ಪುತ್ತೂರಿಗೆ ಎಸ್ಪಿ ಕಚೇರಿ ಸ್ಥಳಾಂತರಗೊಳಿಸಿ ಇಲ್ಲವೇ ಡಿಎಆರ್ ಘಟಕವನ್ನಾದರೂ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ಯತೀಶ್ ಎನ್., ಡಿಸಿಪಿಗಳಾದ ಸಿದ್ಧಾಥ್ರ್ ಗೋಯಲ್, ದಿನೇಶ್ ಕುಮಾರ್, ಕೋಸ್ಟ್ಗಾರ್ಡ್ ಕಮಾಂಡರ್ ಎಂ.ಎ. ಅಗರವಾಲ್ ಉಪಸ್ಥಿತರಿದ್ದರು. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ವಂದಿಸಿ, ವಿವೇಕ್ ಕಾರ್ಯಕ್ರಮ ನಿರೂಪಿಸಿದರು.
ಬಿ ಕೆಟಗರಿ ಮಹಿಳಾ ಠಾಣೆಗೆ 1 ಕೋಟಿ ರೂ.:
ಮಹಿಳಾ ಪೊಲೀಸ್ ಠಾಣೆಗೆ ಜಾಗವಿದ್ದು, ಠಾಣೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂಬ ಶಾಸಕ ಅಶೋಕ್ ರೈಯವರ ಬೇಡಿಕೆಗೆ ಸ್ಪಂದಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಬಿ ಕೆಟಗರಿಯಡಿ ಮಹಿಳಾ ಠಾಣೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಒದಗಿಸುವುದಾಗಿ ಹೇಳಿದರು. ಡಿಎಆರ್ ಕಚೇರಿ ಸ್ಥಳಾಂತರದ ಬೇಡಿಕೆಯ ಬಗ್ಗೆ ಅದಿ ಕಾರಿಗಳಲ್ಲಿ ಪರಿಶೀಲನೆಗೆ ತಿಳಿಸುವುದಾಗಿ ಸಚಿವರು ಭರವಸೆ ನೀಡಿದರು.







