
ಮಹಾರಾಷ್ಟ್ರ ಚುನಾವಣೆ: ಬಿಜೆಪಿಯಿಂದ ಕಂಟೈನರ್‌ನಲ್ಲಿ ಹಣ
ಮಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಸೋಲಾಗಿದೆ. ಬಿಜೆಪಿಯಿಂದ ಮಹಾರಾಷ್ಟ್ರಕ್ಕೆ ಕಂಟೈನರ್‌ನಲ್ಲಿ ಹಣ ಬಂದಿದೆ. ಹಣ ಎಣಿಸುವ ಮಷಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಖರ್ಚು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ರಾಜ್ಯದಲ್ಲಿ ಬೇರೆ ಪಕ್ಷಗಳು ಭಾರಿ ಹಣದ ಹೊಳೆ ಹರಿಸಿತ್ತು. ನಾವು ಕೂಡ ಅವರಿಗಿಂತ ಹೆಚ್ಚು ಪೈಪೋಟಿ ನೀಡಿದ್ದೇವೆ. ನಾವೇನು ಖಾವಿ ತೊಟ್ಟ ಸನ್ಯಾಸಿಗಳಲ್ಲ ಎಂದಿದ್ದಾರೆ.
ಅವರ ಹಣ, ಹೆಂಡಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ. ನಮ್ಮ ಕೆಲಸದ ಮೂಲಕ ಕೂಡ ಪ್ರತಿಪಕ್ಷಗಳಿಗೆ ಉತ್ತರ ಕೊಟ್ಟಿದ್ದೇವೆ. ಬಿಜೆಪಿ ಚುನಾವಣೆಗೂ ಮೊದಲು ಸುಳ್ಳು ವದಂತಿ ಹಬ್ಬಿಸಿದ್ದರು. ಗ್ಯಾರಂಟಿ, ವಕ್ಫ್ ವಿಚಾರ ಪ್ರಸ್ತಾಪಿಸಿ ಅಪಪ್ರಚಾರ ಮಾಡಿದರು. ಬಿಜೆಪಿಯಲ್ಲಿ ಕಾಂಗ್ರೆಸ್‌ಗಿಂತ ಡಬಲ್ ಕುಟುಂಬ ರಾಜಕಾರಣ ಇದೆ. ಒಂದೊಂದು ಕುಟುಂಬದಲ್ಲಿ 10 ಜನರು ರಾಜಕಾರಣದಲ್ಲಿ ಇದ್ದಾರೆ. ಕಾಂಗ್ರೆಸ್ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಾರೆ. ಬಿಜೆಪಿಯವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೊಣ ನೋಡುತ್ತಿದ್ದಾರೆ. ನಾವು ಕೊಟ್ಟಿರುವ ಕಾರ್ಯಕ್ರಮಗಳಿಂದ ಶಿಗ್ಗಾಂವಿಯಲ್ಲಿ ಗೆದ್ದಿದ್ದೇವೆ. ನಾವು ಕಾಂಗ್ರೆಸ್ ಪಕ್ಷದವರು ಗೂಬೆ ಅಲ್ಲ ಅಂತ ಬಿಜೆಪಿಗೆ ಗೊತ್ತಿಲ್ಲ. ಇಡಿ, ಐಟಿ ಬಳಸಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗಲ್ಲ. ಸಿಎಂ ಬದಲಾವಣೆ ಯಡಿಯೂರಪ್ಪನವರ ಸಹಿ ಮಾಡಿದ ಹಾಗೇ ಅಲ್ಲ. ಚುನಾವಣಾ ಆಯೋಗ ಬಿಜೆಪಿಯ ಅಂಗವಾಗಿ ಬಿಟ್ಟಿದೆ ಎಂದು ವಾಗ್ದಾಳಿ ಮಾಡಿದರು.