ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಾಧ್ಯಮಗಳು ಕೊಡುಗೆ ಅಪಾರ: ಸದಾಶಿವ ಉಳ್ಳಾಲ

ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಾಧ್ಯಮಗಳು ಕೊಡುಗೆ ಅಪಾರ: ಸದಾಶಿವ ಉಳ್ಳಾಲ


ಮಂಗಳೂರು: ಸಮಾಜವನ್ನು ತಿದ್ದುವ ಕೆಲಸವನ್ನು ಪತ್ರಿಕಾ ಕ್ಷೇತ್ರ ಸಮರ್ಥವಾಗಿ ನಿರ್ವಹಿಸುತ್ತಿದೆ. ತಪ್ಪು ಮಾಡಿದಾಗ ಎಚ್ಚರಿಸುವ, ಜನರ ಜವಾಬ್ದಾರಿಯನ್ನು ನೆನಪಿಸುವ ಕೆಲಸ ಮಾಧ್ಯಮಗಳಿಂದ ಆಗುತ್ತಿದೆ. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಾಧ್ಯಮಗಳು ಕೊಡುಗೆ ನೀಡುತ್ತಿವೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿಯಾಗಿದ್ದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮಾತನಾಡಿ, ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ ಎಂಬುದು ಈ ಬಾರಿಯ ರಾಷ್ಟ್ರೀಯ ಪತ್ರಿಕಾ ದಿನದ ಧ್ಯೇಯವಾಕ್ಯವಾಗಿದೆ. ಆಧುನಿಕ ತಂತ್ರಜ್ಞಾನದಿಂದ ಮಾಧ್ಯಮದ ಸ್ವರೂಪ ಬದಲಾಗಿದ್ದು, ನವಮಾಧ್ಯಮಗಳ ಭರಾಟೆಯಿಂದ ಯಾವುದು ಮಾಧ್ಯಮ, ಯಾವುದು ಮಾಧ್ಯಮವಲ್ಲ ಎಂಬುದನ್ನು ಹೇಳಲಾಗದ ಸ್ಥಿತಿ ಎದುರಾಗಿದೆ. ಕಾರ್ಯಕ್ರಮಗಳ ಲೈವ್ ಪರಿಕಲ್ಪನೆಯಿಂದ ಸುದ್ದಿಗಳ ಸೋಸುವಿಕೆ ಇಲ್ಲದಾಗಿದೆ. ಇದರಿಂದಾಗಿ ಮಾಧ್ಯಮದ ಘನತೆ, ಗೌರವಕ್ಕೆ ಕುಂದು ಉಂಟಾಗಿದೆ. ನವಮಾಧ್ಯಮಗಳು ನೈತಿಕತೆಯಿಂದ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕಿದೆ ಎಂದರು.

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ನಗರದ ಹಿರಿಯ ಪತ್ರಿಕಾ ವಿತರಕ, ಕಂಕನಾಡಿಯ ರೇಣುಕಾ ನ್ಯೂಸ್ ಎಜೆನ್ಸಿಯ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟ ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅವರಿಗೆ ಈ ವೇಳೆ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article