ಕನ್ನಡ ಗ್ರಾಮ, ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ ಸಾಹಿತ್ಯ ಕೇಂದ್ರ: ಸಿ.ಎನ್. ಅಶೋಕ್

ಕನ್ನಡ ಗ್ರಾಮ, ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ ಸಾಹಿತ್ಯ ಕೇಂದ್ರ: ಸಿ.ಎನ್. ಅಶೋಕ್


ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆ ಇಲ್ಲಿನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಆಯೋಜನೆ ಹಾಗೂ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಗಡಿನಾಡಿನ ಕನ್ನಡಿಗರು ನಡೆಸುತ್ತಿರುವ ಹೋರಾಟ ಶ್ಲಾಘನೀಯವಾದದ್ದು. ಕನ್ನಡ ಗ್ರಾಮ-ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ-ಸಾಹಿತ್ಯ ಕೇಂದ್ರ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತರಾದ, ಶಿಕ್ಷಣ ತಜ್ಞ ಸಿ.ಎನ್. ಅಶೋಕ್ ಹೇಳಿದರು.

ಕಾಸರಗೋಡು ಮಧೂರು ರಸ್ತೆಯ ಪಾರೆಕಟ್ಟೆ ಮೀಪುಗುರಿಯ ಕನ್ನಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆಯುವ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ತುಂಬುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿಯೂ ಮಕ್ಕಳ ಸಾಹಿತ್ಯ ಪರಿಷತ್ತು ಈಗಾಗಲೇ 10 ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡಲಾಗಿದೆ. ಕರ್ನಾಟಕ ಸರಕಾರದಿಂದ ಯಾವುದೇ ಧನ ಸಹಾಯ ಪಡೆಯದೆ ಸಮ್ಮೇಳನ ನಡೆಸುತ್ತಿರುವುದು ಪರಿಷತ್ತಿನ ಹೆಗ್ಗಳಿಕೆಯಾಗಿದೆ. ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮೊಟ್ಟಮೊದಲ ಐತಿಹಾಸಿಕ ಮಕ್ಕಳ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದು ಹೆಮ್ಮೆ. ಇಂತಹ ಸಮ್ಮೇಳನಗಳು ಇನ್ನು ಎಲ್ಲಾ ರಾಜ್ಯ ಹೊರ ರಾಜ್ಯ ಜಿಲ್ಲೆಗಳಲ್ಲಿ ಸಂಘಟಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ. ಕೇರಳದಲ್ಲಿ ಕನ್ನಡಿಗರು ಅಲ್ಪಸಂಖ್ಯಾಕರಾಗಿದ್ದರೂ, ಕನ್ನಡಿಗರೆಲ್ಲರೂ  ಜೊತೆಗೂಡಿ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ಕನ್ನಡ ಕಟ್ಟುವ ಬೆಳೆಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವೆಂದರು.

ಶಾಲಾ ಕಾಲೇಜಿನಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದು ಮತ್ತು ಮಕ್ಕಳಲ್ಲಿನ ಸಾಹಿತ್ಯ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನ ಔಚಿತ್ಯ ಪೂರ್ಣವಾಗಿದೆ ಎಂದು ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಹರ್ಷಿತಾ. ಪಿ. (9ನೇ ತರಗತಿ, ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕ) ಹೇಳಿದರು.

ಸಮ್ಮೇಳನದ ಸಹ ಅಧ್ಯಕ್ಷೆ ಶಿವಾನಿ ಕೂಡ್ಲು (10ನೇ ತರಗತಿ ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಕೂಡ್ಲು) ಮಾತನಾಡಿ, ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಗಡಿನಾಡಿನಲ್ಲಿ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿದೆ ಎಂದರು.

ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಕಾಸರಗೋಡು ಮೀಪುಗುರಿಯ ಕೂಡ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಿಂದ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಕನ್ನಡ ಗ್ರಾಮದ ಸಮ್ಮೇಳನದ ನಗರದವರೆಗೆ ನಡೆಯಿತು. 

ಸಮ್ಮೇಳನದ ಸರ್ವಾಧ್ಯಕ್ಷೆ ಹರ್ಷಿತಾ ಪಿ., ಸಹ ಅಧ್ಯಕ್ಷೆ ಶಿವಾನಿ ಕೂಡ್ಲು ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕೆ.ಆರ್. ಸ್ವಾತಿ ಕಾರ್ಯಾಡು, ಸಹ ಅಧ್ಯಕ್ಷತೆ ವಹಿಸಿದ ಪ್ರಣತಿ ಆರ್. ಗಡಾದ ರಾಜ್ಯಮಟ್ಟದ ಸಣ್ಣ ಕಥಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಆಶ್ರಯ ಎಸ್. ಬೇಳ ಹಾಗೂ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕವಿಗಳು, ಸಾಹಿತಿಗಳು, ಲೇಖಕರು, ಮಾಧ್ಯಮದವರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್, ವಿವಿಧ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಪ್ರತಿನಿಧಿಗಳಾದ ಸುಮಾರು 200 ಮಂದಿ ಸಾಹಿತ್ಯ ಸಾಂಸ್ಕೃತಿಕ ನಿಯೋಗದ ಸದಸ್ಯರು, ಕಾಸರಗೋಡು ಪ್ರದೇಶದ ವಿವಿಧ ಸಂಘ ಸಂಸ್ಥೆಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಹೆತ್ತವರು, ಪೋಷಕರು ಸುಮಾರು 600 ಕ್ಕೂ ಅಧಿಕ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ-ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ಸುಮಾರು 50ಕ್ಕೂ ಅಧಿಕ ವಿವಿಧ ಶಾಲಾ ಕಾಲೇಜಿನಿಂದ ವಿದ್ಯಾರ್ಥಿ, ಅಧ್ಯಾಪಕರ ಪ್ರತಿನಿಧಿಗಳು ಒಂದು ದಿನದಲ್ಲಿ ಸುಮಾರು 1500ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಸಮ್ಮೇಳನದ ಹೆಗ್ಗಳಿಕೆಯಾಗಿದೆ.

ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಜೆ.ಪಿ. ನಗರ, ಪರಿಷತ್ತು ಧ್ವಜಾರೋಹಣವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ನೆರವೇರಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article