ಪತ್ನಿ, ಮಗು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ತನಿಖೆ ಚುರುಕು

ಪತ್ನಿ, ಮಗು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ತನಿಖೆ ಚುರುಕು


ಮಂಗಳೂರು: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮುಲ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮನೆಯ ಒಳಗಡೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಕಾರ್ತಿಕ್ ಭಟ್ ಮತ್ತು ಪತ್ನಿ ಪ್ರಿಯಾಂಕಳ ಎರಡು ಮೊಬೈಲ್ ಹಾಗೂ ಎರಡು ಚೂರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಮನೆಯನ್ನು ಸೀಜ್ ಮಾಡಿದ್ದು, 2-3 ದಿನ ಯಾರು ಕೂಡ ವಾಸ ಇರಬಾರದು ಎಂದು ಸೂಚನೆ ನೀಡಿದ್ದಾರೆ.

ಒಂದೇ ಮನೆಯ ಬೇರೆ ಬೇರೆ ಕೋಣೆಯಲ್ಲಿ ಕಾರ್ತಿಕ್ ಭಟ್ ದಂಪತಿ ಮತ್ತು ಕಾರ್ತಿಕ್ ತಂದೆ ಜನಾರ್ದನ ಭಟ್ ದಂಪತಿ ವಾಸವಿದ್ದರು. ಜನಾರ್ದನ ಭಟ್ ಬೆಳಗ್ಗೆದ್ದು ನೇರವಾಗಿ ಹೊಟೇಲಿಗೆ ಹೋಗುತ್ತಿದ್ದರೆ, ಕಾರ್ತಿಕ್ ಮತ್ತು ಪತ್ನಿ, ಮಗು ಹೊರಗಡೆ ಹೋಗಿಯೇ ಊಟ, ತಿಂಡಿ ಮಾಡುತ್ತಿದ್ದರು. ಇದಲ್ಲದೆ, ಮನೆಯೊಳಗಿನ ಕೋಣೆಯಲ್ಲಿ ನೇತು ಹಾಕಿದ್ದ ಫೋಟೋಗೆ ಮಸಿ ಬಳಿಯಲಾಗಿದೆ. ಕಾರ್ತಿಕ್, ಪತ್ನಿ ಪ್ರಿಯಾಂಕ ಮತ್ತು ಮಗು ಇದ್ದ ಫೋಟೋವನ್ನು ಸ್ವತಃ ಕಾರ್ತಿಕ್ ಸಾಯಲು ಹೋಗುವುದಕ್ಕೂ ಮುನ್ನ ಮಸಿ ಬಳಿದಿದ್ದನೇ ಎಂಬ ಶಂಕೆ ಮೂಡಿದೆ.

ತನಿಖೆ ಸಂದರ್ಭದಲ್ಲಿ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದು, ಶುಕ್ರವಾರ ಕೊಲೆ ಕೃತ್ಯದ ಬಳಿಕ ಕಾರ್ತಿಕ್ ಭಟ್ ತನ್ನ ದ್ವಿಚಕ್ರ ವಾಹನವನ್ನು ಮುಲ್ಕಿ ಬಳಿಯ ಕಲ್ಲಾಪು ದೇವಸ್ಥಾನದ ಬಳಿ ಇಟ್ಟು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ರೈಲು ಹಳಿಯ ಮೇಲೆ ಕೈಗೆ ಬಟ್ಟೆ ಸುತ್ತಿಕೊಂಡು ಹೋಗುವ ದೃಶ್ಯವೂ ಸೆರೆಯಾಗಿದ್ದು ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದ್ದು ಏನಿದೆ ಎನ್ನುವುದು ಗೊತ್ತಾಗಿಲ್ಲ.

ಈ ನಡುವೆ, ಪ್ರಿಯಾಂಕ ತಾಯಿ ನೀಡಿದ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ. ಸೋಮವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಲ್ಲಿಂದ ಜೈಲಿನತ್ತ ಕರೆದೊಯ್ಯುತ್ತಿದ್ದಾಗಲೇ ಶ್ಯಾಮಲಾ ಮತ್ತು ಕಣ್ಮಣಿ ತಲೆತಿರುಗಿದ ರೀತಿ ನೆಲಕ್ಕೆ ಬಿದ್ದಿದ್ದಾರೆ. ಹೀಗಾಗಿ ಆರೋಪಿಗಳಿಬ್ಬರನ್ನೂ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ, ಮನೆಯಲ್ಲಿ ತಂದೆ-ತಾಯಿ ಜೊತೆಗೆ ಮಾತು ಬಿಟ್ಟಿದ್ದ ಕಾರ್ತಿಕ್ ಭಟ್ ಸ್ನೇಹಿತರ ಬಳಿ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಆದರೂ, ಶೋಕಿ ಜೀವನ ಮಾಡುತ್ತಿದ್ದ. ದಿನವೂ ಪತ್ನಿ, ಮಗುವಿನ ಜೊತೆಗೆ ಹೊಟೇಲಿಗೆ ತೆರಳಿ ಊಟ, ತಿಂಡಿ ಮಾಡುತ್ತಿದ್ದ. ಸರಿಯಾದ ಕೆಲಸ ಇಲ್ಲದ ಕಾರಣ ಮನೆಯಲ್ಲಿ ತಂದೆ, ತಾಯಿ ಜೊತೆಗೂ ಮಾತು ಬಿಟ್ಟಿದ್ದರಿಂದ ಖರ್ಚಿಗಾಗಿ ಸಾಲ ಮಾಡಿಕೊಂಡಿದ್ದ. ಆದರೂ ಮೊನ್ನೆ ದೀಪಾವಳಿಗೆ ಪತ್ನಿ, ಮಕ್ಕಳ ಜೊತೆಗೆ ಫ್ಲಾಟ್ ಕೆಳಗೆ ಬಂದು ಪಟಾಕಿ ಸಿಡಿಸಿ ಸಂಭ್ರಮಿಸಿದ್ದ. ಇದೇ ವೇಳೆ, ಪತ್ನಿ ಜೊತೆಗೂ ಜಗಳ ಮಾಡಿಕೊಂಡು ಹಣದ ಚಿಂತೆಯ ನಡುವೆ ಅವರು ಮಲಗಿದ್ದಾಗಲೇ ಚೂರಿಯಿಂದ ತಿವಿದು ಕೊಂದಿದ್ದನೇ ಎಂಬ ಶಂಕೆ ಮೂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article