ಬಿಜೆಪಿ ಅಪಪ್ರಚಾರ ಮೀರಿ ಕಾಂಗ್ರೆಸ್ ಗೆಲುವು: ಹರೀಶ್ ಕುಮಾರ್

ಬಿಜೆಪಿ ಅಪಪ್ರಚಾರ ಮೀರಿ ಕಾಂಗ್ರೆಸ್ ಗೆಲುವು: ಹರೀಶ್ ಕುಮಾರ್


ಮಂಗಳೂರು: ದಕ್ಷಿಣ ಕನ್ನಡದ 30 ಗ್ರಾಪಂ ಕ್ಷೇತ್ರಗಳು ಮತ್ತು ಪುರಸಭೆಯ 1 ಕ್ಷೇತ್ರ ಸೇರಿ ಒಟ್ಟು 31 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ 24 ಕ್ಷೇತ್ರಗಳನ್ನು ಗೆದ್ದಿದ್ದರೆ, ಬಿಜೆಪಿ 7ಕ್ಕೆ ಇಳಿದಿದೆ. ಬಿಜೆಪಿ ಅಪಪ್ರಚಾರವನ್ನು ಮೀರಿ ದ.ಕ.ದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 31 ಕ್ಷೇತ್ರಗಳ ಪೈಕಿ ಚುನಾವಣೆಗೆ ಮೊದಲು 14ರಲ್ಲಿ ಕಾಂಗ್ರೆಸ್ ಬೆಂಬಲಿಗರು ಇದ್ದರೆ, ಬಿಜೆಪಿ ಸಂಖ್ಯೆ 17 ಇತ್ತು. ಕಳೆದ ವಿಧಾನಸಭೆ ಚುನಾವಣೆಗಿಂತ ಮುಂಚೆ ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ ಅಂತ ಬಿಜೆಪಿಯವರ ಅಪಪ್ರಚಾರವನ್ನು ಜನ ನಂಬಿದ್ದರು. ಈಗ ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನ ಆಗುತ್ತಿರುವುದರಿಂದ ಬಿಜೆಪಿಯ ಸುಳ್ಳು ಜನರಿಗೆ ಗೊತ್ತಾಗಿದೆ. ದ.ಕ.ದಲ್ಲಿ ಕಾಂಗ್ರೆಸ್ ಶಕ್ತಿ ವೃದ್ಧಿಯಾಗಿದೆ ಎನ್ನುವುದನ್ನು ಈ ಉಪಚುನಾವಣೆ ತೋರಿಸಿಕೊಟ್ಟಿದೆ ಎಂದರು.

ಮುಂದಿನ ದಿನಗಳಲ್ಲಿ ಜಿಪಂ, ತಾಪಂ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬರಲಿದ್ದು, ಎಲ್ಲದರಲ್ಲೂ ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ. ಗ್ಯಾರಂಟಿ ಫಲಾನುಭವಿ ಮಹಿಳಾ ಮತದಾರರು ಕಾಂಗ್ರೆಸ್ ಜತೆಗಿದ್ದಾರೆ ಎಂದು ಹರೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್, ಕಸ್ತೂರಿರಂಗನ್ ವಿಚಾರದ ಕುರಿತು ಬಿಜೆಪಿ ಇದೀಗ ಹೋರಾಟಕ್ಕಿಳಿದಿದೆ. ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಮಾರ್ಗಸೂಚಿ ನೀಡಿದ್ದೇ ಕೇಂದ್ರ ಬಿಜೆಪಿ ಸರ್ಕಾರ. ಅದೇ ರೀತಿ ಕಸ್ತೂರಿ ರಂಗನ್ ವರದಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದ್ದು, ಇದೀಗ ಮತ್ತೊಮ್ಮೆ ‘ಜಾರಿ ಮಾಡಲ್ಲ’ ಎಂಬ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಬಿಜೆಪಿಯವರು ಇಲ್ಲಿ ಪ್ರತಿಭಟನೆ ಮಾಡೋದು ಬಿಟ್ಟು ದೆಹಲಿಗೆ ಹೋಗಿ ಅವರದ್ದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ತಿರುಗೇಟು ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 2800 ಎಕರೆ ವಕ್ಫ್ ಜಮೀನಿಗೆ ನೋಟಿಸ್ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರ ಜಮೀನು ಬೇಡ ಅಂತ ಸ್ವತಃ ವಕ್ಫ್ ಬೋರ್ಡ್ ಹೇಳಿದೆ. ಬಿಜೆಪಿ ತನ್ನ ತಪ್ಪನ್ನು ಮರೆಮಾಚಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಸಂವಿಧಾನದಲ್ಲಿರುವ ಜಾತ್ಯತೀತ, ಸಮಾಜವಾದಿ, ಸಮಗ್ರತೆ ಪದಗಳನ್ನು ತೆಗೆದುಹಾಕುವಂತೆ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ, ವಿಷ್ಣು ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪದಗಳನ್ನು ತೆಗೆಯಲಾಗದು ಅಂತ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನೇ ವಜಾಗೊಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು.

ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳ ಪೈಕಿ ಗೆಲ್ಲಲಾಗದು ಎಂಬಂತಿದ್ದ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ಹಾಗೂ ಗ್ಯಾರಂಟಿ ಅನುಷ್ಠಾನದಿಂದ ಜನರಿಗೆ ನಂಬಿಕೆ ಬಂದಿದ್ದು, ಬಿಜೆಪಿ ಅಪಪ್ರಚಾರಕ್ಕೆ ಧಿಕ್ಕಾರ ಹೇಳಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಶುಭೋದಯ ಆಳ್ವ, ಸುಹಾನ್ ಆಳ್ವ, ವಿಕಾಸ್ ಶೆಟ್ಟಿ, ಜಿತೇಂದ್ರ ಸುವರ್ಣ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article