ಮಾನವತೆಯ ಮಹಾ ಬೆಳಕು ಸ್ವಾಮಿ ವಿವೇಕಾನಂದರು: ಅಕ್ಷಯಾ ಗೋಖಲೆ

ಮಾನವತೆಯ ಮಹಾ ಬೆಳಕು ಸ್ವಾಮಿ ವಿವೇಕಾನಂದರು: ಅಕ್ಷಯಾ ಗೋಖಲೆ


ಮಂಗಳೂರು: ಸ್ವಾಮಿ ವಿವೇಕಾನಂದರು ಭಾರತದ ಮಾನವೀಯತೆಯ ಹಾಗೂ ಪ್ರಜ್ಞೆಯ ಶಾಶ್ವತ ಬೆಳಕಾಗಿ ಉಳಿದಿದ್ದಾರೆ. ಇಡೀ ವಿಶ್ವಕ್ಕೆ ಭಾರತೀಯ ತತ್ವಜ್ಞಾನ ಮತ್ತು ಸನಾತನ ಧರ್ಮದ ಮಹತ್ವವನ್ನು ಪರಿಚಯಿಸಿದ ಈ ಮಹಾನ್ ಯೋಗಿ, ತನ್ನ ಸಂದೇಶಗಳಿಂದ ಜನರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಉಂಟುಮಾಡಿದರು. ‘ಉತ್ತಿಷ್ಠಿತ, ಜಾಗ್ರತ!’ ಎಂಬ ನಿನಾದದಲ್ಲಿ ಪ್ರತಿಫಲಿಸಿದಂತೆ ಅವರು ಜೀವನದ ಪ್ರತಿ ಕ್ಷಣವನ್ನು ಸಾರ್ಥಕತೆಯಿಂದ, ಸಾಧನೆಯ ದಾರಿಗೆ ಬೆಳೆಸಲು ಪ್ರೇರೇಪಿಸಿದರು ಎಂದು ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಹೇಳಿದರು.

ಅವರು ಇಂದು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತನೇ ಉಪನ್ಯಾಸದಲ್ಲಿ ‘ಮಹಾ ಬೆಳಕು ಸ್ವಾಮಿ ವಿವೇಕಾನಂದರ ಜೀವನ-ಸಂದೇಶ’ ಎಂಬ ವಿಷಯದ ಕುರಿತು ಮಾತನಾಡಿದರು.

ಇಂದು ಸ್ವಾಮಿ ವಿವೇಕಾನಂದರ ಶಕ್ತಿ, ಧೈರ್ಯ, ಮತ್ತು ತತ್ವದ ಬೆಳಕು ಎಲ್ಲರಿಗೂ ಹೊಸ ಬೆಳಕಿನಂತಾಗಿದೆ. ಅವರ ‘ವಿಶ್ವಸಮಾಧಾನ’ದ ದೃಷ್ಟಿಕೋನ ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ಜಗತ್ತಿಗೆ ಒಗ್ಗಟ್ಟಿನ ಸಂದೇಶವನ್ನು ನೀಡಿದರು.

ಸ್ವಾಮಿ ವಿವೇಕಾನಂದರು ದೈವಸಾಕ್ಷಾತ್ಕಾರವನ್ನು ಮಾತ್ರವಲ್ಲ, ಮಾನವ ಸೇವೆಯನ್ನು ಸಹ ಪ್ರಧಾನ ಧರ್ಮವೆಂದು ಸಾರಿದರು. ನೀವು ಬಡವರ ಸೇವೆ ಮಾಡುತ್ತಿರುವಾಗ, ಆ ದೇವರೇ ನಿಮ್ಮ ಮುಂದೆ ನಿಂತಿರುವರು ಎಂಬ ಅವರ ಸಂದೇಶ, ಧರ್ಮವನ್ನು ಕೇವಲ ದೇವಾಲಯದ ಭಿತ್ತಿಗಳ ಒಳಗೆ ಮಾತ್ರವಲ್ಲ, ಸಾಮಾಜಿಕ ಜೀವನದ ಪ್ರತಿಯೊಂದು ಅಂಶದಲ್ಲೂ ಪ್ರತಿಷ್ಠಾಪಿಸುವಂತೆ ತೋರಿಸಿತು ಎಂದರು.

ಈ ಸಂದರ್ಭದಲ್ಲಿ ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಎಂ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರೊ. ಸುಪ್ರಭಾ ಎಂ, ತ್ರಿಶಾ ಸಮೂಹ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್ ಕಟ್ಟೆ, ತ್ರಿಶಾ ಕ್ಲಾಸೆಸ್ ಮಂಗಳೂರಿನ ಮುಖ್ಯಸ್ಥ ಪ್ರೊ. ಯಶಸ್ವಿನಿ ಯಶಪಾಲ್, ಕಾರ್ಯಕ್ರಮ ಸಂಯೋಜಕ ಪ್ರೊ. ನಮೃತಾ ಮತ್ತು ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ವಿದ್ಯಾಲಕ್ಷ್ಮಿ ವಂದಿಸಿ, ವಿದ್ಯಾರ್ಥಿನಿಯಾದ ಇಂಚರ ತಂತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article