
ಸರಣಿ ಹೋರಾಟ, ಗೃಹ ಸಚಿವ, ಮುಖ್ಯಮಂತ್ರಿಗಳ ಭೇಟಿಗೆ ಸಿಪಿಎಂ ನಿರ್ಧಾರ
ಮಂಗಳೂರು: ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮತ್ತು ಮಂಗಳೂರು ನಗರ ಕಮಿಷನರ್ರನ್ನು ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ಹಾಗೂ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ.
ಕಮಿಷನರ್ ಅನುಮಪ್ ಅಗರ್ವಾಲ್ ಹಾಗೂ ಡಿಸಿಪಿ ಸಿದ್ಧಾರ್ಥ ಗೋಯಲ್ ನಡೆಯು ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನಸಾಮಾನ್ಯರು, ದುರ್ಬಲ ವಿಭಾಗಗಳು ಹಕ್ಕುಗಳಿಗಾಗಿ ಧ್ವನಿ ಎತ್ತಲಾಗದ ಸ್ಥಿತಿ ಮಂಗಳೂರಿನಲ್ಲಿ ನಿರ್ಮಾಣ ಗೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನೀತಿಗಳನ್ನು ಜಾರಿಗೊಳಿಸುವ ಯತ್ನ ಬಹಿರಂಗವಾಗಿಯೇ ಪೊಲೀಸ್ ಕಮಿಷನರ್ ನಡೆಸುತ್ತಿದ್ದಾರೆ. ಪ್ಯಾಲೆಸ್ತೀನ್ ಹಿಂಸಾಚಾರ ಖಂಡಿಸಿ, ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ನಡೆಸಿದ ಧರಣಿಗಳ ಸಂದರ್ಭ ಕಮಿಷನರ್ ನಡೆದುಕೊಂಡ ರೀತಿಯಿಂದ ಇದು ಬಹಿರಂಗಗೊಂಡಿದೆ. ಜನಸಾಮಾನ್ಯರ ದುಡಿಮೆ, ಸಂಪಾದನೆಯನ್ನು ಕಸಿದುಕೊಳ್ಳುತ್ತಿರುವ ಜೂಜು, ಮಟ್ಕಾ ಹಾವಳಿಯಿಂದ ಮಂಗಳೂರು ನಗರ ತತ್ತರಿಸಿದೆ. ಕಮಿಷನರ್ ಮಂಗಳೂರಿನಿಂದ ನಿರ್ಗಮಿಸದಿದ್ದಲ್ಲಿ ನೆಮ್ಮದಿ ಸಾಧ್ಯ ವಿಲ್ಲ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.