ಕನ್ನಡ ನಾಡು ನುಡಿಯ ಅಭಿಮಾನದ ಪ್ರತೀಕ ಕರ್ನಾಟಕ ಸುವರ್ಣ ಸಂಭ್ರಮ: ಡಾ. ಸಂತೋಷ್ ಕುಮಾರ್

ಕನ್ನಡ ನಾಡು ನುಡಿಯ ಅಭಿಮಾನದ ಪ್ರತೀಕ ಕರ್ನಾಟಕ ಸುವರ್ಣ ಸಂಭ್ರಮ: ಡಾ. ಸಂತೋಷ್ ಕುಮಾರ್


ಮಂಗಳೂರು: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಆಶಯದೊಂದಿಗೆ ನಡೆಯುತ್ತಿರುವ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮವು ನಮ್ಮ ರಾಜ್ಯ ಹಾಗೂ ಭಾಷೆಯ ಅಭಿಮಾನದ ಪ್ರತೀಕವಾಗಿದೆ ಎಂದು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ಹೇಳಿದರು.

ಅವರು ಮಂಗಳೂರು ತುಳು ಭವನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ನಡೆಯುವ ಬಹುಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಲಾದ ಪ್ರೌಢಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ನಿತ್ಯೋತ್ಸವ ಮೂಲಕ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅನ್ನುವುದನ್ನು ಸಂಭ್ರಮಿಸಿದವರು ನಾವು, ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಚಿತ್ರದ ಮೂಲಕ ಈ ಅರಿವು ಹಾಗೂ ಅಭಿಮಾನವನ್ನು ಬಿತ್ತೋಣ, ಆ ಮೂಲಕ ಬಹುಸಂಸ್ಕೃತಿಯ ಆಶಯವನ್ನು ಸಾರ್ಥಕಗೊಳಿಸೋಣ ಎಂದರು.

ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಸುಮಂಗಳಾ ಎಸ್. ನಾಯಕ್ ಅವರು ಮಾತನಾಡಿ, ಭಾರತವು ಬಹುಸಂಸ್ಕೃತಿಯ ದೇಶ, ನಮ್ಮ ಕರಾವಳಿ ಜಿಲ್ಲೆ ಇದಕ್ಕೆ ನೈಜ ಉದಾಹರಣೆಯಾಗಿದೆ, ಎಲ್ಲಾ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸಲು ವಿದ್ಯಾರ್ಥಿಗಳು ಕಲಿಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪೂರಕವಾಗಲಿದೆ ಎಂದರು.

ಹಿರಿಯ ಕಲಾವಿದ ಗಣೇಶ್ ಸೋಮಾಯಾಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಅಭಿರುಚಿಯನ್ನು ಮೂಡಿಸಿದಾಗ ವಿದ್ಯಾರ್ಥಿಗಳು ಕಲಿಕೆ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಾಗುವುದು ಎಂದು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕವಾಗಿ ಮಾತನಾಡಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್,  ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿ ನಿರ್ದೇಶಕ ಕೋಟಿ ಪ್ರಸಾದ್ ಆಳ್ವಾ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಾಲಸಾ ಚಿತ್ರಕಲಾ ಶಾಲೆಯ ವಿಭಾಗ ಮುಖ್ಯಸ್ಥ ಎನ್.ಎಸ್. ಪತ್ತಾರ್, ಆರ್ಟ್ ಕೆನರಾ ಟ್ರಸ್ಟ್ ಸದಸ್ಯ ಹರೀಶ್ ಕೊಡಿಯಾಲ್ ಬೈಲ್   ಉಪಸ್ಥಿತರಿದ್ದರು. ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರೀಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article