
ಪೊಲೀಸ್ ಠಾಣೆಗೆ ಜಿಲ್ಲಾ ಹಿರಿಯ ನ್ಯಾಯಾಧೀಶರ ದಿಢೀರ್ ಭೇಟಿ: ಕಡತಗಳ ಪರಿಶೀಲನೆ
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶರಾದ ಶೋಭಾ ಬಿ.ಜೆ. ಅವರು ಮೂಲ್ಕಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೋಲಿಸ್ ಠಾಣೆಯ ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಠಾಣೆಗೆ ದೂರು ನೀಡಲು ಬರುವವರಿಗೆ ಹೊರಗಡೆ ಕುಳಿತುಕೊಳ್ಳಿರಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಠಾಣೆಯ ಎದುರು ಭಾಗದಲ್ಲಿ ಸಮರ್ಪಕ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿ ಸೂಕ್ಷ್ಮ ಪ್ರದೇಶವಾದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳು ವಿಪರೀತವಾಗುತ್ತಿದ್ದು ನಿಯಂತ್ರಿಸಬೇಕು. ಜನರಿಗೆ ಪೋಸ್ಕೋ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೆ.ಎಸ್. ಅವರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಮಾಹಿತಿ ಶೀಘ್ರ ನಡೆಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭ ಸ್ಥಳೀಯರು ಠಾಣೆಗೆ ನೂತನ ಗಸ್ತು ವಾಹನ ಹಾಗೂ ಮೂಲ್ಕಿ ತಾಲೂಕಿಗೆ ನೂತನ ನ್ಯಾಯಾಲಯ ಸ್ಥಾಪನೆಗೆ ನ್ಯಾಯಾಧೀಶರ ಬಳಿ ಮನವಿ ಮಾಡಿದರು.
ಎಸ್‌ಐ ಅನಿತಾ, ಜಿಲ್ಲಾ ಕಾನೂನು ನೆರವು ಕೇಂದ್ರದ ಸಲಹೆಗಾರ ಮಂಜುನಾಥ ಆರ್.ಕೆ., ವಕೀಲರಾದ ಶಶಿಕುಮಾರ್ ಕೆ.ಎಸ್. ರಾವ್ ನಗರ, ಮೂಲ್ಕಿ ಠಾಣೆಯ ಎಎಸ್‌ಐ ಉಮೇಶ್, ಸಂಜೀವ ಮತ್ತಿತರರು ಉಪಸ್ಥಿತರಿದ್ದರು.