
ಬ್ಯಾಂಕ್ ದರೋಡೆಗೆ ಯತ್ನಿಸುತ್ತಿದ್ದ ಅಂತಾರಾಜ್ಯ ಕುಖ್ಯಾತ ಕಳ್ಳರಿಬ್ಬರ ಬಂಧನ: ನಾಲ್ಕು ಮಂದಿ ಪರಾರಿ
ಮಂಜೇಶ್ವರ: ಬ್ಯಾಂಕ್ ದರೋಡೆಗೈಯಲು ಆಗಮಿಸಿದ ಕುಖ್ಯಾತ ದರೋಡೆಕೋರರ ತಂಡವೊಂದನ್ನು ಪರಾರಿಯಾಗಲೆತ್ನಿಸುವ ವೇಳೆ ಊರವರು ಹಿಂಬಾಲಿಸಿಕೊಂಡು ಹೋಗಿ ಕಾರಿಗೆ ಅಡ್ಡ ಹಾಕಿ, ಇಬ್ಬರನ್ನು ಸೆರೆ ಇಡಿದ ಘಟನೆ ಇಂದು ಮುಂಜಾನೆ 3 ಗಂಟೆ ವೇಳೆ ನಡೆದಿದೆ. ಘಟನೆಯಲ್ಲಿ ಉಳಿದ 4 ಮಂದಿ ಕಾಡ ಹಾದಿಯಲ್ಲಿ ಪರಾರಿಯಾಗಿದ್ದಾರೆ.
ವರ್ಕಾಡಿ ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಿನಿಂದ ನಿರಂತರ ಕಳವು ಕೃತ್ಯ ನಡೆಯುತ್ತಿದ್ದು, ಇದುವರೆಗೆ ಮಂಜೇಶ್ವರ ಪೊಲೀಸರಿಗೆ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ನಿರಂತರವಾಗಿ ಕಳವು ಪ್ರಕರಣ ನಡೆಯುತ್ತಿರುವ ವೇಳೆ ಊರ ನಾಗರೀಕರು ಕಳೆದ ಕೆಲವು ದಿನಗಳಿಂದ ಕಳ್ಳರನ್ನ ಹಿಡಿಯಲು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದರು.
ಅದೇ ರೀತಿ ಮಜೀರ್ಪಳ್ಳದ ಮನೆಯೊಂದರಲ್ಲಿ ಇಂದು ಮದುವೆ ನಡೆಯುತ್ತಿದ್ದು, ಮನೆಯ ಅಲಂಕಾರಗಳನ್ನು ಮಾಡಿ ತಮ್ಮ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸ್ಥಳೀಯ ಮಂದಿ ಮಜ್ಜೀರ್ಪಳ್ಳ ಪೇಟೆಗೆ ತಲುಪಿದಾಗ ಸ್ಟಿಫ್ಟ್ ಕಾರಿನಲ್ಲಿ ಬಂದ ಕುಖ್ಯಾತ ದರೋಡೆಕೋರರ ತಂಡ ಬರೋಡಾ ಬ್ಯಾಂಕ್ ಸಮೀಪದಲ್ಲಿ ಕಾರು ನಿಲ್ಲಿಸಿ ದರೋಡೆಗೈಯಲು ಹೊಂಚು ಹಾಕುತ್ತಿದ್ದರು.
ದರೋಡೆಕೋರರ ಚಲನವಲನಗಳನ್ನು ಗಮನಿಸಿದಾಗ ಸ್ಥಳೀಯರಿಗೆ ಸಂಶಯವುಂಟಾಗಿ ಅವರನ್ನ ವಿಚಾರಿಸಲು ಬಳಿಗೆ ತೆರಳುತ್ತಿದ್ದಂತೆ ದರೋಡೆಕೋರರ ತಂಡ ತಮ್ಮ ಸ್ವಿಫ್ಟ್ ಕಾರಿನಲ್ಲಿ ನೇರ ಆನೆಕಲ್ಲು ಭಾಗಕ್ಕೆ ತೆರಳಿದರು. ಕೂಡಲೇ ಸ್ಥಳೀಯ ಮಂದಿ ಇವರನ್ನು ಹಿಂಬಾಲಿಸಿದ್ದಾರೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿ ಕೊನೆಗೆ ದೈಗೊಳಿ ಸರ್ವಿಸ್ ಸ್ಟೇಶನ್‌ನಲ್ಲಿ ಕಾರಿಗೆ ಅಡ್ಡ ಹಾಕಿದ್ದಾರೆ.
ಕಾರಿನಲ್ಲಿದ್ದ ದರೋಡೆ ಕೋರರನ್ನು ವಿಚಾರಿಸಿದಾಗ ಅಸಂಬದ್ಧವಾಗಿ ಮಾತನಾಡಿದ್ದಾರೆ. ಈ ವೇಳೆ ಕಾರಿನ ಡಿಕ್ಕಿ ತೆಗೆದು ನೋಡಿದಾಗ ನಂಬರ್ ಪ್ಲೇಟ್ ವಿವಿಧ ಟೂಲ್ಸ್ ಗಳು ಪತ್ತೆಯಾಗಿವೆ. ಸಂಶಯಗೊಂಡು ದರೋಡೆ ಕೊರರನ್ನು ಹಿಡಿದು ವಿಚಾರಿಸಿದಾಗ ಘರ್ಷಣೆ ಉಂಟಾಗಿದೆ. ಈ ವೇಳೆ ನಾಲ್ಕು ಮಂದಿ ತಪ್ಪಿಸಿ, ಕಾಡಿನ ಮಧ್ಯೆ ಓಡಿ ಪರಾರಿಯಾದರು.
ಈ ಸಂದರ್ಭ ಮಾಹಿತಿ ಅರಿತು ಸ್ಥಳಕ್ಕೆ ತಲುಪಿದ ಮಂಜೇಶ್ವರ ಠಾಣಾಧಿಕಾರಿ ಇ. ಅನೂಪ್ ಅವರ ನೇತೃತ್ವದ ತಂಡ ಸ್ಥಳೀಯರು ಹಿಡಿದಿಟ್ಟಿದ್ದ ಇಬ್ಬರನ್ನು ವಶಕ್ಕೆ ತೆಗೆದಿದೆ. ಉಳ್ಳಾಲದ ಫೈಸಲ್, ತುಮಕೂರಿನ ಸಯ್ಯದ್ ಅಮಾನ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪರಾರಿಯಾದವರಿಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಕಾರಿನಿಂದ ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಕಟ್ಟರ್ ಸೇರಿದಂತೆ ಹಲವು ರೀತಿಯ ಮಾರಕಾಯುಧಗಳನ್ನು ವಶಕ್ಕೆ ತೆಗೆಯಲಾಗಿದೆ. ಕಾಸರಗೋಡಿಗೆ ಕುಖ್ಯಾತ ಕಳ್ಳರ ತಂಡವೊಂದು ಲಗ್ಗೆ ಹಾಕುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಮೊದಲೇ ಲಭಿಸಿತ್ತು. ಇದರಂತೆ ಠಾಣಾಧಿಕ ಇ ಅನೂಪ್ ಅವರ ನೇತೃತ್ವದಲ್ಲಿ ಗಡಿ ಪ್ರದೇಶಗಳಲ್ಲಿ ತಪಾಸಣೆ ನಿರತಗಿದ್ದಾರೆ. ತಂಡವನ್ನು ಸೆರೆ ಹಿಡಿಯಲು ಊರವರ ಸಹಾಯ ಕೂಡಾ ಪೊಲೀಸರಿಗೆ ಲಭಿಸಿರುವುದು ವರದಾನವಾಗಿದೆ. ಇಬ್ಬರನ್ನು ಸೆರೆ ಹಿಡಿಯಲು ಸಹಕಾರಿಯಾದ ಸ್ಥಳೀಯ ಯುವಕರನ್ನು ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಅಭಿನಂದಿಸಿದ್ದಾರೆ. ಸೆರೆಗೀಡಾದವರನ್ನು ಹೆಚ್ಚಿನ ತನಿಖೆಗೊಳಪಡಿಸಲಾಗುತ್ತಿದೆ.