
‘ಮನ್ಸ’ ಜಾತಿಯನ್ನು ಒಳ ಮೀಸಲಾತಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಆಗ್ರಹ: ನ. 17ರಂದು ಮೂಡುಬಿದಿರೆಯಲ್ಲಿ ವಿಚಾರ ಸಂಕಿರಣ
ಮೂಡುಬಿದಿರೆ: ಸರಕಾರದ ಪ.ಜಾ. ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಇರುವ ಹಲವಾರು ಜಾತಿಗಳು ಆತಂಕದಲ್ಲಿದ್ದು, ಒಳಮೀಸಲಾತಿಯನ್ನು ಜಾರಿಗೊಳಿಸುವ ಪ್ರಕ್ರಿಯೆ ಆರಂಭಗೊಂಡಿರುತ್ತದೆ ಈ ಸಂದರ್ಭದಲ್ಲಿ ‘ಮನ್ಸ’ ಎಂಬುದನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕು. ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ, ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಮೂಡುಬಿದಿರೆಯ ಕನ್ನಡಭವನದಲ್ಲಿ ನ.17ರಂದು ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳು ಮತ್ತು ಅವುಗಳ ಅಸ್ಮಿತೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ತಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ) ಇದರ ಗೌರವ ಸಲಹೆಗಾರ ಆಚ್ಯುತ ಸಂಪಿಗೆ ತಿಳಿಸಿದರು.
ಅವರು ಬುಧವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸುಪ್ರೀಂ ಕೋರ್ಟಿನ ಆದೇಶದಂತೆ ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಮಿಸಲಾತಿಯು ಪರಿಶಿಷ್ಟ ಜಾತಿಗಳಲ್ಲಿ ಸರಿಯಾಗಿ ಹಂಚಿಕೆಯಾಗಿರದೆ, ಕೆಲವೇ ಕೆಲವು ಪರಿಶಿಷ್ಟ ಜಾತಿಗಳು ಮೀಸಲಾತಿಯ ಬಹುಪಾಲನ್ನು ಪಡೆದುಕೊಂಡು ಬಲಿಷ್ಠಗೊಂಡು, ಹಲವಾರು ದುರ್ಬಲ ಜಾತಿಗಳು ವಂಚಿತವಾಗಿ ಸಾಮಾಜಿಕವಾಗಿ ಇನ್ನಷ್ಟು ದುರ್ಬಲಗೊಂಡಿರುವುದು ವಾಸ್ತವ. ಒಳಮೀಸಲಾತಿ ಜಾರಿಯಿಂದ ಅವಿಭಜಿತ ದ.ಕ. ಜಿಲ್ಲೆ ಮತ್ತು ಮಲೆನಾಡು ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿಗಳಲ್ಲೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ‘ಮನ್ಸ’ ಜಾತಿಗೆ ಬಹುದೊಡ್ಡ ನಷ್ಟ ಮತ್ತು ಅನ್ಯಾಯವಾಗುವುದು ಖಂಡಿತಾ ಎಂದು ಹೇಳಿದರು.
ಸರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮನ್ಸ ಎಂಬ ಅಸ್ಪ್ರಶ್ಯ ಜಾತಿಯ ಹೆಸರು ಹೆಸರು ಸೇರ್ಪಡೆಗೊಳ್ಳದಿರುವುದರಿಂದ ಈ ಜಾತಿ ಜನರು ತಮ್ಮದಲ್ಲದ ‘ಆದಿದ್ರಾವಿಡ’, ‘ಆದಿಕರ್ನಾಟಕ’, ಹೊಲೆಯ, ಹಸಳರು ಎಂಬಿತ್ಯಾದಿ ಹೆಸರುಗಳಿಂದ ಜಾತಿ ದೃಢೀಕರಣ ಪತ್ರ ಪಡೆಯುತ್ತಿರುವುದು. ಆದಿದ್ರಾವಿಡ ಮತ್ತು ಆದಿಕರ್ನಾಟಕ ಈ ಎರಡೂ ಕೂಡಾ ಜಾತಿ ಸೂಚಕ ಪದಗಳೇ ಅಲ್ಲ. ಬದಲಾಗಿ ಈ ಎರಡೂ ಹೆಸರುಗಳು ‘ಆಡಳಿತಾತ್ಮಕ ಪರಿಭಾಷೆ’ ಆಗಿವೆ ಎಂದರು.
ಈ ಹಿಂದಿನ ಸರಕಾರ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ತಯಾರು ಮಾಡುವಾಗ ಅಸಮರ್ಪಕ ಹಾಗೂ ಅವೈಜ್ಞಾನಿಕ ಕ್ಷೇತ್ರ ಕಾರ್ಯ ನಡೆಸಿದ್ದರ ಪರಿಣಾಮವಾಗಿ ಆ ಎರಡು ಹೆಸರುಗಳನ್ನು ಜಾತಿಗಳೆಂದು ಪರಿಗಣಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಬಹು ದೊಡ್ಡ ಲೋಪ.ಇನ್ನೊಂದು ಕಡೆ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಮನ್ಸ ಜಾತಿಯ ಜನರು ಜಾತಿವಾರು ಸಮೀಕ್ಷೆ ಸಂದರ್ಭದಲ್ಲಿ ಅಜ್ಞಾನದಿಂದಲೋ ಅಥವಾ ಮನ್ಸ ಎಂದರೆ ಕೀಳು ಹಾಗೂ ಆದಿದ್ರಾವಿಡ ಎಂದರೆ ಮೇಲು ಎಂಬ ಭ್ರಮೆಯಿಂದಲೋ ಸರಿಯಾದ ಮಾಹಿತಿಯನ್ನು ಸಮೀಕ್ಷೆದಾರರಿಗೆ ಒದಗಿಸಿಕೊಟ್ಟಿರದ ಕಾರಣ ಮನ್ಸ ಜಾತಿಯ ಪ.ಜಾತಿ ಪಟ್ಟಯಲ್ಲಿ ಸೇರ್ಪಡೆಗೊಳಿಸದಿರುವುದಕ್ಕೆ ಮುಖ್ಯ ಕಾರಣವಾಗಿದೆ. ಶಿಕ್ಷಣ, ಸಾಮಾಜಿಕವಾಗಿ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆಸಿ ಉಪಜಾತಿಗಳ ಗೊಂದಲಗಳನ್ನು ನಿವಾರಿಸಬೇಕಾಗಿದೆ ಎಂದರು.
ವಿಚಾರ ಸಂಕಿರಣವನ್ನು ಕರ್ನಾಟಕ ವಿವಿ ಧಾರವಾಡ ಇಲ್ಲಿಯ ಮಾನವಶಾಸ್ತ್ರ ಅಧ್ಯಯನದ ಪ್ರಾಧ್ಯಾಪಕ ಡಾ. ಸದಾನಂದ ಸುಗಂಧಿ ಉದ್ಘಾಟಿಸಲಿದ್ದಾರೆ. ಸಂವಿದಾನ ತಜ್ಞ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಮುಖ್ಯ ವಿಚಾರ ಮಂಡನೆಕಾರರಾಗಿ ಭಾಗವಹಿಸಲಿದ್ದು, ಸಂಘಟನೆಯ ಗೌರವಾಧ್ಯಕ್ಷ ಶಾಂತಾರಾಮ್ ಎಂ. ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.
ಅಧ್ಯಕ್ಷ ವೆಂಕಣ್ಣ ಕೊಯ್ಯೂರು, ಗೌರವಾಧ್ಯಕ್ಷ ಎಂ. ಶಾಂತಾರಾಮ, ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಂ. ರಮೇಶ್ ಬೋದಿ, ಪ್ರ.ಕಾರ್ಯದರ್ಶಿ ಉದಯ ಗೋಳಿಯಂಗಡಿ, ಗೋಪಾಲ್ ಮುತ್ತೂರು ಉಪಸ್ಥಿತರಿದ್ದರು.