
ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್: ಆಳ್ವಾಸ್ ಕಾಲೇಜು ಸತತ 4ನೇ ಬಾರಿ ಚಾಂಪಿಯನ್ಸ್
Monday, November 11, 2024
ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಬೆಸೆಂಟ್ ಮಹಿಳೆಯರ ಕಾಲೇಜು ಇವುಗಳ ಸಂಯುಕ್ರಾಶ್ರಯದಲ್ಲಿ ನಡೆದ ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಮಹಿಳೆಯರ ತಂಡ ಸತತ 4ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಆಳ್ವಾಸ್ ಕಾಲೇಜು ತಂಡವು ವಾಮದಪದವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಹಾಗೂ ಉಜಿರೆಯ ಎಸ್.ಡಿ.ಎಂ ಕಾಲೇಜು ತಂಡವು ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತೇರ್ಗಡೆಗೊಂಡವು.
ಫೈನಲ್‌ನಲ್ಲಿ ಆಳ್ವಾಸ್ ತಂಡವು ಎಸ್.ಡಿ.ಎಂ. ಕಾಲೇಜು ತಂಡವನ್ನು 39-14 ಅಂತರದಲ್ಲಿ ಸೋಲಿಸಿ ವೆರಿ ರೆವೆರೆಂಡ್ ಮೆಸೆಂಜರ್ ಎ. ಪತ್ರಾವೋ ಮೆಮೋರಿಯಲ್ ರೋಲಿಂಗ್ ಟ್ರೋಫಿ ಹಾಗೂ ಶಾಶ್ವತ ಫಲಕವನ್ನು ಪಡೆದುಕೊಂಡಿತು.
ಆಳ್ವಾಸ್ ತಂಡದ ಸುಶ್ಮಿತಾ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿ ಪಡೆದರೆ, ಧನಲಕ್ಷ್ಮೀ ಉತ್ತಮ ದಾಳಿಗಾರ್ತಿ, ಮತ್ತು ಎಸ್.ಡಿ.ಎಂ ತಂಡದ ಸುಮಯ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.