ಸ್ಕೂಟರ್ ಗೆ ಖಾಸಗಿ ಬಸ್  ಢಿಕ್ಕಿ: 5 ಲಕ್ಷ ಪರಿಹಾರ ನೀಡಿದ ಬಸ್ ಮಾಲಕ

ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ: 5 ಲಕ್ಷ ಪರಿಹಾರ ನೀಡಿದ ಬಸ್ ಮಾಲಕ


ಮೂಡುಬಿದಿರೆ: ಇಲ್ಲಿನ ಮಿಜಾರು ಮೈಟ್ ಇಂಜಿನಿಯರಿಂಗ್ ಕಾಲೇಜು ಬಳಿ ಸೋಮವಾರ ಬೆಳಿಗ್ಗೆ ಖಾಸಗಿ ಬಸ್‌ವೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರೆ, ಸುಮಿತ್ರ ಹಾಗೂ ಸಂಬಂಧಿ, ಸಾನ್ವಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಹಾಗೂ ವಿದ್ಯಾರ್ಥಿಗಳು ಬಸ್‌ಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಅಲ್ಲದೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸುವ ಚಾಲಕರು ಮತ್ತು ಬೇಜವಾಬ್ದಾರಿಯಿಂದ ವರ್ತಿಸುವ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಮೂಡುಬಿದಿರೆಯಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ `ಮಾಸ್ಟರ್' ಹೆಸರಿನ ಖಾಸಗಿ ಬಸ್‌ನ ಚಾಲಕ ಅತೀ ವೇಗದಿಂದ ಚಲಾಯಿಸಿಕೊಂಡು ಬಂದಿದ್ದು ಮೈಟ್ ಕಾಲೇಜು ತಿರುವು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮೈಟ್ ಕಾಲೇಜು ಬಸ್‌ಗೆ ಮೊದಲು ಢಿಕ್ಕಿ ಹೊಡೆದಿದೆ. ಬಳಿಕ ಹೆದ್ದಾರಿ ಬಿಟ್ಟು ಮೈಟ್ ಕಾಲೇಜು ರಸ್ತೆಗೆ ನುಗ್ಗಿದ ಬಸ್ಸು ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು. ಇದೇ ಕಾಲೇಜಿಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಬಚಾವಾದರು. ಈ ವೇಳೆ ಸಮಯ ಪ್ರಜ್ಞೆ ಮೆರೆದ ರಿಕ್ಷಾ ಚಾಲಕರೊಬ್ಬರು ಬಸ್ ಮುಂದೆ ನುಗ್ಗಿ ಅನಾಹುತವಾಗುವುದನ್ನು ತಪ್ಪಿಸಲು ರಿಕ್ಷಾವನ್ನು ಅಡ್ಡ ನಿಲ್ಲಿಸಿದರು. ರಿಕ್ಷಾಕ್ಕೆ ಗುದ್ದಿದ ಬಸ್ ಬಳಿಕ ನಿಂತಿತ್ತು.

ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸಮಿತ್‌ರಾಜ್, ಎಬಿವಿಪಿ ಮುಖಂಡರಾದ ಸುವಿನ್, ಪವನ್, ಸಾಕ್ಷಾತ್, ಬಿಜೆಪಿ ಮುಖಂಡರಾದ ಕೆ.ಪಿ. ಸುಚರಿತ ಶೆಟ್ಟಿ, ರಂಜಿತ್ ಪೂಜಾರಿ ಮತ್ತಿತರರು ಬಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಖಾಸಗಿ ಬಸ್‌ಗಳ ಅತಿವೇಗದ ಚಾಲನೆಯಿಂದ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ. ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಬಸ್ ಮಾಲಕ ರಫೀಕ್ ಸಂತ್ರಸ್ತರಿಗೆ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ಪರಿಹಾರ ಒದಗಿಸುತ್ತೇನೆ ಹಾಗೂ ತಪ್ಪಿತಸ್ಥ ಬಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಭರವಸೆ ನೀಡಿದರು. 

ಮಂಜೂರಾದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಬಸ್‌ಗಳಿಗೆ ಡೋರ್ ಅಳವಡಿಸಬೇಕು. ಖಾಸಗಿ ಬಸ್ ಚಾಲಕರ ಪರವಾನಗೆಯನ್ನು ಪರಿಶೀಲಿಸಬೇಕು. ತಪ್ಪಿತಸ್ಥ ಚಾಲಕರ ಚಾಲನಾ ಪರವಾನಗೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. 

ಪಣಂಬೂರು ಎಸಿಪಿ ಶ್ರೀಕಾಂತ್ ಮಾತನಾಡಿ, ಈ ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಆರೋಪಿಗಳನ್ನಾಗಿಸಲಾಗುವುದು. ಖಾಸಗಿ ಬಸ್‌ಗಳಿಂದಾಗುವ ತೊಂದರೆಗಳ ಕುರಿತು ಚರ್ಚಿಸಲು ಶೀಘ್ರವೇ ಆರ್‌ಟಿಒ ಪೋಲಿಸ್ ಹಾಗೂ ಖಾಸಗಿ ಬಸ್ ಮಾಲಕರ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂತೆಗೆಯಲಾಯಿತು. ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಸೂಕ್ತ ಬಂದೋಬಸ್ತು ನಡೆಸಿದರು. ಚಾಲಕ ನಿಜಾಮ್‌ನನ್ನು ಪೋಲಿಸರು ಬಂಧಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article