ಆಳ್ವಾಸ್ ದೀಪಾವಳಿ ಸಂಭ್ರಮದಲ್ಲಿ ಸಾಂಸ್ಕೃತಿಕ ವೈಭವ

ಆಳ್ವಾಸ್ ದೀಪಾವಳಿ ಸಂಭ್ರಮದಲ್ಲಿ ಸಾಂಸ್ಕೃತಿಕ ವೈಭವ


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಯ ಸಂಭ್ರಮದಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೇಳೈಸಿತು.

ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ನೀಲಕಂಠನ ಆರಾಧನೆಯ ‘ಭೋ ಶಂಭೋ, ಶಿವ ಶಂಭೋ, ಸ್ವಯಂ ಭೋ’ ಶಾಸ್ತ್ರೀಯ ನೃತ್ಯದ ಮೂಲಕ ಚಾಲನೆ ದೊರೆಯಿತು.

ಅನಂತರ ಕೃಷ್ಣ-ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ-ಶ್ಯಾಮ ನರ್ತನವು ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು.

ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ’ ಯಕ್ಷ ರೂಪಕವು ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು. ’ಕೊಳಲನೂದುತ ಬಂದ ಕೃಷ್ಣ’  ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ ಸೃಷ್ಟಿಸಿತು.

ಭಾರತೀಯ ಮಾರ್ಷಲ್ ಕಲಾ ಮಾದರಿಯ ಮಣಿಪುರಿ ಸ್ಟಿಕ್ ಡ್ಯಾನ್ಸ್ ಈಶಾನ್ಯ ಭಾರತದ ಸಾಹಸದ ದರ್ಶನ ನೀಡಿತು. ಒಬ್ಬರ ಮೇಲೆ ಮತ್ತೊಬ್ಬರು ಏರಿ ನಿರ್ಮಿಸಿದ ಪಿರಮಿಡ್, ಜಿಗಿತ, ಬಾಯಿಗಿರಿಸಿದ ಚೂರಿ, ಅಗ್ನಿಯ ಆಟ ರೋಮಾಂಚನಗೊಳಿಸಿತು.

ಈಶಾನ್ಯದ ಬಳಿಕ ಭಾರತದ ದಕ್ಷಿಣಕ್ಕೆ ಹೊರಳಿದ ವೇದಿಕೆಯು ಕೇರಳದ ಚೆಂಡೆ ಹಾಗೂ ತಾಳದ ನಾದಕ್ಕೆ ಕಿವಿಯಾಯಿತು. ನಾದದ ಜೊತೆಗೆ ಚೆಂಡೆ ಹಾಗೂ ತಾಳ ವಾದಕರು ಹೆಜ್ಜೆ ಹಾಕಿದರು.

ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು. ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು.

ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ನ ತಾಂತ್ರಿಕ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಹುಡುಗ-ಹುಡುಗಿಯರ ಸ್ಪರ್ಧೆಯೇ ಏರ್ಪಟ್ಟು, ಕನ್ನಡ ಧ್ವಜ ಹಾರಾಡಿತು.

ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ‘ಭೂಮಿ’ ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು. ಆಶಿಂಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ’ವರ್ಷಧಾರೆ’ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು.

ಕೊನೆಯಲ್ಲಿ ವೇದಿಕೆಯಲ್ಲಿ ಗೊಂಬೆ ವಿನೋದಾವಳಿ ನೃತ್ಯ ರಂಗೇರಿದರೆ, ಆಗಸದಲ್ಲಿ ಸಿಡಿಮದ್ದು ಚಿತ್ತಾರ ಮೂಡಿಸಿತು. ಬೆಳಕಿನ ಜೊತೆ ಗೊಂಬೆಗಳು ಅಂದ ಹೆಚ್ಚಿಸಿದವು. ಕುಲದಲ್ಲಿ ಕೀಳ್ಯಾವುದೋ... ತಂದನಾನಿ ಹಾಡಿನೊಂದಿಗೆ ತೆರೆಬಿತ್ತು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article