
ಬೆಳಕು ಅಂತರಂಗ ಅರಳಿಸಲಿ: ಆಳ್ವಾಸ್ ದೀಪಾವಳಿ ಸಂಭ್ರಮದಲ್ಲಿ ಡಾ. ಆಳ್ವ ಆಶಯ
ಮೂಡುಬಿದಿರೆ: ಸರ್ವಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಸರ್ವ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು, ಗುರುವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2024’ನ್ನು ಸಂಭ್ರಮದಿಂದ ಆಚರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿಶ್ವದ ಮೂರು ಪ್ರಮುಖ ಹಬ್ಬಗಳು ಕ್ರಿಸ್ಮಸ್, ರಮ್ಜಾನ್ ಹಾಗೂ ದೀಪಾವಳಿ. ಈ ಪೈಕಿ ದೀಪಾವಳಿ ಸರ್ವಧರ್ಮೀಯರ ಹಬ್ಬವಾಗಿ ಪರಿವರ್ತನೆಗೊಂಡಿದೆ ಸೌಹಾರ್ದತೆಯನ್ನು ಸಂಕೇತಿಸಿದರು. ಬೆಳಕು ನಿಷ್ಪಕ್ಷಪಾತ. ಎಲ್ಲರ ಅಂತರಂಗದ ಬೆಳಕು ಬೆಳಗಬೇಕು. ಭಾವನೆ, ಜವಾಬ್ದಾರಿಗಳಲ್ಲಿ, ಕರ್ತವ್ಯದಲ್ಲಿ ನಾವು ಬೆಳಗಬೇಕು ಎಂದು ಹಾರೈಸಿದರು.
ಕರ್ತವ್ಯ ಎಂಬ ಬತ್ತಿ, ಜ್ಞಾನ ಎಂಬ ಎಣ್ಣೆ ಹಾಗೂ ಹಣತೆ ಎಂಬ ಶಿಕ್ಷಣ ಸಂಸ್ಥೆ ಇದ್ದಾಗ ವಿದ್ಯಾರ್ಥಿಗಳ ಬದುಕು ಬೆಳಗಲು ಸಾಧ್ಯ. ಪ್ರತಿದಿನವೂ ದೀಪಾವಳಿ ಆದರೆ, ಒಳಿತನ್ನು ಆಯ್ಕೆ ಮಾಡುವ ಸಾಮರ್ಥ್ಯ ನಿಮ್ಮದಾಗಬೇಕು. ಅಂತರಂಗದ ಬೆಳಗಿ, ಕಾಣುವ ಕಾಣಿಕೆ ನಿಮ್ಮದಾಗಲಿ ಎಂದರು.
ಕೊಂಬು, ಕಹಳೆ, 36 ಛತ್ರಿ ಚಾಮರದ ಜೊತೆ, 100ಕ್ಕೂ ಅಧಿಕ ದೇವಕನ್ಯೆಯರು, ದೀಪ, ಕಳಶ ಹಿಡಿದ ಬಾಲಿಕೆಯರು ಹಾಗೂ ಪುಟಾಣಿಗಳ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಶುಭ ಸೂಚಕವಾದ ನೆಲದ ಮೂಲ ನಿವಾಸಿಗಳ ಕೊಳಲು ಹಾಗೂ ಡೋಲು, ಚೆಂಡೆ ನಿನಾದವು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 20 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯ ಬೆಳಕು ಲೋಕ ಬೆಳಗಿತು. ಮೂರು ನೂರಕ್ಕೂ ಹೆಚ್ಚು ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ಒಟ್ಟು ವೇದಿಕೆಯ ಮೆರುಗು ಹೆಚ್ಚಿಸಿದರು.
ಇದಕ್ಕೂ ಮೊದಲು ತುಳುನಾಡಿನ ಕೃಷಿ ಪ್ರಧಾನವಾದ ದೀಪಾವಳಿ ಹಬ್ಬದ ಆಚರಣೆ ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್ ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಲಾಯಿತು. ಆರತಿ ಬೆಳಗಿ ಆರಾಧಿಸಲಾಯಿತು.
ಬಳಿಕ ವೇದಿಕೆ ಮುಂಭಾಗದಲ್ಲಿಯೇ ತುಳಸಿ ಪೂಜೆ ನಡೆಯಿತು. ಕದಿರು ಕಟ್ಟಿ ಮನೆ ತುಂಬಿಸುವ ಸಮೃದ್ಧಿಯನ್ನು ಆಶಿಸಲಾಯಿತು.
ಕಳಸೆ, ನೇಗಿಲು, ನೊಗ, ಮುಡಿ ಕಟ್ಟುವ ಕೊದಂಟಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿಯ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ ‘ಸಿರಿ-ಸಂಪತ್ತು-ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು.
ನಂತರದ ದೇವಾರಾಧನೆಯಲ್ಲಿ ವಿಘ್ನ ನಿವಾರಕ ಗಣಪತಿ, ವಿದ್ಯಾ ಅಧಿಪತಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮೀ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀಕೃಷ್ಣ ದೇವರ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ದೀಪಾರಾಧನೆ ಮಾಡಿ ಪೂಜಿಸಲಾಯಿತು.
ಪಾತಾಳಕ್ಕೆ ತೆರಳಿದರೂ ಮತ್ತೆ ಮತ್ತೆ ತನ್ನ ಸಾಮ್ರಾಜ್ಯಕ್ಕೆ ಚಿತ್ತೈಸುವಂತೆ ಬಲಿಯೇಂದ್ರ ಚಕ್ರವರ್ತಿಯನ್ನು ಆರಾಧಿಸಿ ತುಳುವರು ಕರೆಯುತ್ತಾರೆ. ಕೃಷಿ ಮೂಲಕ ತನ್ನ ಸಾಮ್ರಾಜ್ಯವನ್ನು ಸ್ವರ್ಗ ಮಾಡಿದ ಬಲಿಯೇಂದ್ರ ಚಕ್ರವರ್ತಿಯನ್ನು ಆಹ್ವಾನಿಸಲಾಯಿತು.
ತುಳು ಸಂಸ್ಕೃತಿಯಂತೆ ಹಾಲೆ (ಪಾಳೆ) ಅಥವಾ ಸರ್ವಪರ್ಣಿಕ ಮರದ ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ. ಎಂ. ಮೋಹನ ಆಳ್ವ ಅವರು ನಾಡಿನ ಸಮೃದ್ಧಿಯನ್ನು ಪ್ರಾರ್ಥಿಸಿದರು. ತುಳುನಾಡು ಸೇರಿದಂತೆ ಕರಾವಳಿ ನಂಬಿಕೆಯಾದ ಬಲಿಯೇಂದ್ರ ಪೂಜೆ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕೆ. ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಚೌಟ, ಐಕಳ ಹರೀಶ್ ಶೆಟ್ಟಿ, ಸಂಗೀತ ನಿರ್ದೇಶಕ ವಿ. ಮನೋಹರ್, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ವೇಣುಗೋಪಾಲ ಶೆಟ್ಟಿ, ನಿತೇಶ್ ಮಾರ್ನಾಡು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.