
ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ದೀಪಾವಳಿ ಆಚರಣೆ
ನಿರಂತರ ಪರಿಶ್ರಮದಿಂದ ಗುರಿ ಸಾಧಿಸಬಹುದು: ಡಾ. ಆನಂದ್
ಮಂಗಳೂರು: ನಿರಂತರ ಯೋಜಿತ ತಯಾರಿ ಮತ್ತು ಅವಿರತ ಪರಿಶ್ರಮದಿಂದ ಗುರಿ ಸಾಧಿಸಬಹುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಹೇಳಿದರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸ್ಪರ್ಧೆಯ ಬಗ್ಗೆ ಆತ್ಮವಿಶ್ವಾಸವಿರಬೇಕು. ಉಳಿದವರ ಯೋಚನೆ ಬಿಟ್ಟು ನಮ್ಮ ಯೋಜನೆಯ ಬಗ್ಗೆ ಸ್ಪಷ್ಟತೆ ಇರಬೇಕು ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುತಜ್ಞೆ ದೀಪಿಕಾ ಎ. ನಾಯಕ್, ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್ ಉಪಸ್ಥಿತರಿದ್ದರು.
ಶ್ರೀಲಕ್ಷ್ಮೀ ಇ ಮತ್ತು ಅಮೃತ ತಲ್ವಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ನಿರ್ದೇಶಕ ರಕ್ಷಿತ್ ಎಂ.ಆರ್. ವಂದಿಸಿದರು.
ಗೂಡುದೀಪ ತಯಾರಿ ಮತ್ತು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕುಣಿತ ಭಜನೆ ಹಾಗೂ ಬಲೀಂದ್ರ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದ ಮೊದಲು ಲಕ್ಷ್ಮೀ ಪೂಜೆ ನಡೆಯಿತು. ದೀಪಾವಳಿಯ ಅಂಗವಾಗಿ ವಿದ್ಯಾರ್ಥಿಗಳು ಆಕಾಶದೀಪಗಳನ್ನು ಆಗಸದಲ್ಲಿ ತೇಲಿಸಿ ಆನಂದಿಸಿದರು.