ಧರ್ಮಸ್ಥಳದಲ್ಲಿ ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ, ನುಡಿನಮನ

ಧರ್ಮಸ್ಥಳದಲ್ಲಿ ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ, ನುಡಿನಮನ


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವೆ ಆಟದ ಸಂಧರ್ಭದಲ್ಲಿ ನ.8 ರಂದು ಅಮೃತವರ್ಷಿಣಿ ಸಭಾಭಾವನದಲ್ಲಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವುದರ ಮೂಲಕ ಮೇಳದ ಕೀರ್ತಿಗೆ ಭಾಜನರಾಗಿ ಇತ್ತೀಚಿಗಷ್ಟೇ ಕಲಾ ಮಾತೆಯ ಮಡಿಲನ್ನು ಸೇರಿದ ಹಿರಿಯ ಕಲಾವಿದರಾದ ಕುಂಬ್ಳೆ ಶ್ರೀಧರ್ ರಾವ್ ಹಾಗೂ ಗಂಗಾಧರ ಪುತ್ತೂರು ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಜರುಗಿತು. 

ಇದೇ ಸಂಧರ್ಭದಲ್ಲಿ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಶ್ರೀ ಮಹಾಗಣಪತಿ ದೇವರ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಬೆಳ್ಳಿಬೆಟ್ಟು ಬಾಲಕೃಷ್ಣ ಭಟ್ ಹಾಗೂ ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೂ ನುಡಿನಮನ ಸಲ್ಲಿಸಲಾಯಿತು.

ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಅವರ ಸಮಕ್ಷಮ ನಡೆದ ಕಾರ್ಯಕ್ರಮದಲ್ಲಿ ಮೇಳದ ಹಿರಿಯ ಕಲಾವಿದ ವಸಂತ ಗೌಡ ಕಾಯರ್ತಡ್ಕ ಗತಿಸಿದ ಕಲಾವಿದರ ಕಲಾ ಸೇವೆಯನ್ನು ಸಂಸ್ಮರಿಸಿ, ನುಡಿನಮನದ ಮೂಲಕ ಸ್ಮರಣಾಂಜಲಿ ಸಲ್ಲಿಸಿದರು. 

ಮೇಳದ ಪ್ರಧಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ,ಮೇಳದ ಸಹ ಪ್ರಬಂಧಕ ಪುಷ್ಪರಾಜ್ ಶೆಟ್ಟಿ, ಕಲಾವಿದರಾದ ಕರುಣಾಕರ ಶೆಟ್ಟಿಗಾರ್, ಚಂದ್ರಶೇಖರ ಸರಪಾಡಿ, ಶಂಭಯ್ಯ ಕಂಜರ್ಪಣೆ, ಚಂದ್ರಶೇಖರ ಧರ್ಮಸ್ಥಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕೀರ್ತಿಶೇಷರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಿ, ಮೌನ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು. ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸೇವೆಯ ಬಯಲಾಟವಾಗಿ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article