
ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳಾದ ಅನುಪಮ ಮತ್ತು ಪ್ರಗತಿ ಅವರಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸರಕಾರಿ ಶಾಲೆ ಹಂಡೇಲು ಇಲ್ಲಿ ಪರಿಸರ ಸಂರಕ್ಷಣೆ ಕುರಿತು ಪಿ.ಆರ್. ಚಟುವಟಿಕೆಯನ್ನು ನಡೆಸಲಾಯಿತು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ನಿಟ್ಟಿನಲ್ಲಿ ಭಾರತದ ಮುಂದಿನ ಭವಿಷ್ಯವಾಗಿರುವ ಮಕ್ಕಳಿಗೆ ಪರಿಸರವನ್ನು ಹೇಗೆಲ್ಲಾ ರಕ್ಷಿಸಬಹುದು ಎಂದು ಕಲಿಸುವ ಕಿರು ಪ್ರಯತ್ನವನ್ನು ಮಾಡಲಾಯಿತು. ಹೇಗೆ ಸಣ್ಣ ಸಣ್ಣ ಹೆಜ್ಜೆಗಳಿಂದ ಮಕ್ಕಳು ಸಹ ಪರಿಸರ ಸಂರಕ್ಷಣೆಯ ಭಾಗವಾಗಬಹುದು ಎಂಬುದನ್ನು ಮಕ್ಕಳಿಗೆ ವಿವರಿಸಲಾಯಿತು. ಈಗ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 12 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಒಟ್ಟು 32 ವಿದ್ಯಾರ್ಥಿಗಳಿದ್ದು, ಪಿ.ಪಿ.ಟಿ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ,ಪರಿಸರ ಉಳಿಸುವ ಬಗ್ಗೆ ಅರಿವು,ಪರಿಸರ ಉಳಿಸಲು ಮಕ್ಕಳು ಯಾವ ರೀತಿಯಾಗಿ ಸಹಕರಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಲಾಯಿತು.ಮಕ್ಕಳಿಗೆ ಹಲವು ಆಟಗಳನ್ನು ಆಡಿಸಿ ವಿಜೇತರಿಗೆ ಪ್ರಶಸ್ತಿಯನ್ನೂ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಸ್ವಾತಿ, ಪ್ರಗತಿ, ದಿಶಾ,ನಿಖಿತಾ ಮತ್ತು ರಿಶಾಂತ್ ಹಾಗೂ ಹಂಡೇಲು ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಸಹ ಶಿಕ್ಷಕರು ಜತೆಗಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ಕುಮಾರಿ ಹಾಗೂ ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮ ಸಂಯೋಜಿಸಿದರು.