
ಪಕ್ಷಿಕೆರೆಯ ಕೊಲೆ ಪ್ರಕರಣ: ಒಂದೇ ಚಿತೆಯಲ್ಲಿ ಮೂವರ ಅಂತ್ಯ ಸಂಸ್ಕಾರ, ಪರಿಸರದಲ್ಲಿ ನೀರವ ಮೌನ
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸ್ತವ್ಯವಿದ್ದ ಕಾರ್ತಿಕ್ ಭಟ್(32) ಎಂಬಾತನು ತನ್ನ ಪತ್ನಿ ಪ್ರಿಯಾಂಕ(28) ಮಗು ಹೃದಯ್ (4) ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ಅಂತ್ಯ ಸಂಸ್ಕಾರ ಮುಲ್ಕಿ ಸಮೀಪದ ಕೆರೆಕಾಡು ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿತು.
ಹಿಂದೂ ರುದ್ರ ಭೂಮಿಯಲ್ಲಿ ಮೂವರ ಮೃತ ದೇಹವನ್ನು ಒಂದೇ ಚಿತೆಯಲ್ಲಿಟ್ಟು ದಹನ ಕಾರ್ಯ ನಡೆಯುತ್ತಿದ್ದಂತೆ ಮನೆಯವರ ರೋದನ ಮುಗಿಲು ಮುಟ್ಟಿತು. ಎರಡು ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮೃತ ಕಾರ್ತಿಕ್ ಭಟ್ ಡೆತ್ ನೋಟ್ ನಲ್ಲಿ ಬರೆದಿಟ್ಟ ಬಗ್ಗೆ ಮೊದಲಿಗೆ ಕಾರ್ತಿಕ್ ಭಟ್ ಕುಟುಂಬಸ್ಥರ ಹಾಗೂ ಪತ್ನಿಯ ತಾಯಿ ಮನೆಯವರಿಗೆ ಸ್ವಲ್ಪಮಟ್ಟಿಗೆ ಗೊಂದಲ ಹಾಗೂ ಮಾತುಕತೆ ನಡೆದು ಅಂತ್ಯಕ್ರಿಯ ನಡೆಸುವ ಬಗ್ಗೆ ಗೊಂದಲ ಉಂಟಾಗಿ ಮಂಗಳೂರು ಎಸಿಪಿ ಶ್ರೀಕಾಂತ್ ಹಾಗೂ ಮುಲ್ಕಿ ಪೋಲಿಸ್ ಇನ್ಸ್ಪೆಕ್ಟರ್ ವಿದ್ಯಾಧರ್ ಹಾಗೂ ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡು ಎರಡು ಕುಟುಂಬಗಳು ಒಗ್ಗಟ್ಟಾಗಿ ಮುಲ್ಕಿ ಸಮೀಪದ ಕೆರೆಕಾಡು ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯ ನಡೆಸಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಈ ಮಧ್ಯೆ ಪ್ರಿಯಾಂಕ ತಾಯಿ ಸಾವಿತ್ರಿ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಅಳಿಯ ಕಾರ್ತಿಕ್ ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡ್ತಿದ್ರು. ನನ್ನ ಮಗಳು ಕೆಲಸಕ್ಕೆ ಹೋಗಲಿ ಎಂದು ಅವಳ ಅತ್ತೆ ಒತ್ತಾಯ ಮಾಡುತಿದ್ರು, ಕಾರ್ತಿಕ್ ಹೆಂಡತಿ ಜೊತೆ ಜಗಳ ಮಾಡಲು ಸಾದ್ಯವಿಲ್ಲ, ಗುರುವಾರ ಬೆಳಿಗ್ಗೆ ಮಗಳು ಪ್ರಿಯಾಂಕ ನನಗೆ ಕರೆ ಮಾಡಿ ಮಾತಾಡಿದ್ದಳು, ಆವಾಗ ಡಿಸೆಂಬರ್ ನಲ್ಲಿ ಶಿವಮೊಗ್ಗಕ್ಕೆ ಬರೋದಾಗಿ ಹೇಳಿದ್ರು ಎಂದು ಹೇಳಿಕೆ ನೀಡಿದ್ದಾರೆ.
ಕಾರ್ತಿಕ್ ಪತ್ನಿ ಮತ್ತು ಮಗು ತಂದೆ ತಾಯಿಯ ಜೊತೆ ವಾಸವಿದ್ದರೂ, ತನ ತಂದೆ ತಾಯಿಯ ಜೊತೆಗಿನ ಸಂಬಂಧ ಅಷ್ಟೇನೂ ಉತ್ತಮವಾಗಿರಲಿಲ್ಲ,
ಮನೆಯ ಒಳಗಿನ ಕೋಣೆಯಲ್ಲಿ ನೇತು ಹಾಕಲಾದ ಕಾರ್ತಿಕ್ ಭಟ್ ತಂದೆ ತಾಯಿಯ ಜೊತೆ ಇರುವ ಗ್ರೂಪ್ ಫೋಟೋದಲ್ಲಿ ಕಾರ್ತಿಕ್ ಭಟ್, ಪತ್ನಿ ಹಾಗೂ ಮಗುವಿನ ಫೋಟೋಗೆ ಮಸಿ ಬಳಿಯಲಾಗಿದ್ದು, ಕುಟುಂಬದ ಒಳಗಿನ ಮನಸ್ತಾಪ ಕಂಡು ಬಂದಿದೆ
ಒಂದೇ ಮನೆಯ ಒಂದು ಕೊಣೆಯಲ್ಲಿ ಕಾರ್ತಿಕ್ ಪತ್ನಿ ಇದ್ದರೆ ಮತ್ತೊಂದು ಕೊಣೆಯಲ್ಲಿ ಕಾರ್ತಿಕ ತಂದೆ ತಾಯಿ ಇರುತ್ತಿದ್ದರು, ಈ ಕಾರಣದಿಂದ ಕಾರ್ತಿಕ್ ಪತ್ನಿ ಮಗು ಶವವಾಗಿ ಬಿದ್ದಿದ್ದರೂ, ಜನಾರ್ಧನ ಭಟ್ ಧಂಪತಿಗಳಿಗೆ ಈ ವಿಷಯ ತಿಳಿಯದಿರುವುದು ವಿಶೇಷವಾಗಿದೆ.
ಪಕ್ಷಿಕೆರೆಯ ಗ್ರಾಮೀಣ ಪ್ರದೇಶದಲ್ಲಿ ನಡೆದ ಭೀಕರ ಕೊಲೆ ಸ್ಥಳೀಯರನ್ನು ಕಂಗಡಿಸಿದ್ದು ಪರಿಸರದಲ್ಲಿ ನೀರವ ಮೌನ ಆವರಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಕಿನ್ನಿಗೋಳಿ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಹೊಸ ಕಾವೇರಿ ಎಂಬಲ್ಲಿ ತಾಯಿ ತನ್ನ ಮೂವರು ಕಂದಮ್ಮಗಳನ್ನು ಬಾವಿಗೆ ದೂಡಿ ಕೊಲೆಗೈದ ಪ್ರಕರಣ ಮಾಸುವ ಮುನ್ನವೇ ಇದೀಗ ನಡೆದ ಭೀಕರ ಘಟನೆ ಜನರನ್ನು ಕಂಗೆಡಿಸಿದೆ.
ಕಾರ್ತಿಕ್ ಬಾಲ್ಯದಿಂದಲೂ ಉತ್ತಮ ಗುಣನಡತೆಯವನಾಗಿದ್ದ ಆದರೆ ಮದುವೆ ನಂತರ ಬದಲಾಗಿದ್ದಾನೆ ಎನ್ನಲಾಗಿದೆ, ನೆರೆ ಕರೆಯವರು ಹೇಳುವ ಪ್ರಕಾರ ಸರಿಯಾದ ಕೆಲಸವಿಲ್ಲದ ಕಾರ್ತಿಕ್ ಅರ್ಥಿಕ ಸಮಸ್ಯೆಯಲ್ಲಿ ಬಲಳುತ್ತಿದ್ದ, ತನ್ನ ಗೆಳೆಯರ ಬಳಿ ಸಾಲ ಕೇಳುತ್ತಿದ್ದ ಎನ್ನಲಾಗಿದೆ. ಅಲ್ಲದೆ ತನ್ನ ಅರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಅನ್ ಲೈನ್ ಆಟದಲ್ಲಿ ತೊಡಗಿಸುತ್ತಿದ್ದ ಅಲ್ಲದೆ ಅದರಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡಿರುವ ಸಾದ್ಯತೆ ಇದೆ ಎನ್ನಲಾಗಿದೆ.