ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ


ಶಿರ್ವ: ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 29ನೇ ವರ್ಷದ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ಬುಧವಾರ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು.

ಹಿರಿಯರಾದ ಉದ್ಯಮಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು. ಬಳಿಕ ಸುಮಾರು 20 ಲ.ರೂ. ವೆಚ್ಚದಲ್ಲಿ ನವೀಕರಣಗೊಂಡ ಸೂರ್ಯಚಂದ್ರ ಜೋಡುಕರೆಯನ್ನು ಉದ್ಘಾಟಿಸಿದರು. ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯ ಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು.

ಸೂರ್ಯಚಂದ್ರ ಜೋಡುಕರೆಯನ್ನು ನವೀಕರಣ ಮಾಡಲು ಸಹಕರಿಸಿದ ಉದ್ಯಮಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಹೇಮಲತಾ ಶೆಟ್ಟಿ ದಂಪತಿ ಹಾಗೂ ಕಂಬಳ ಕ್ಷೇತ್ರದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಮತ್ತು ಸರಪಾಡಿ ಜಾನ್ ಸಿರಿಲ್ ಡಿಸೋಜಾ(ಅಪ್ಪಣ್ಣ) ಅವರನ್ನು ಸಮ್ಮಾನಿಸಲಾಯಿತು.

ಕಂಬಳದಲ್ಲಿ ಭಾಗವಹಿಸಿದ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಮಾತನಾಡಿ, ಮನೆತನಗಳು ಆಚರಿಸಿಕೊಂಡು ಬರುವ ಕಂಬಳದಂತಹ ದೈವೀಕ ಸ್ಪರ್ಶವಿರುವ ತುಳುನಾಡಿನ ಸಂಸ್ಕ್ರತಿ ಪರಂಪರೆಗಳು ಕೊನೆಯಾಗದೆ ಮುಂದಿನ ಪೀಳಿಗೆಗೆ ದಾರಿದೀಪ ವಾಗಬೇಕು ಎಂದು ಹೇಳಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಜಾತಿ, ಮತ ಧರ್ಮದ ಭೇದವಿಲ್ಲದೆ ಸರ್ವ ಜನರೂ ಭಾಗವಹಿಸುವ ತುಳುನಾಡಿನ ಪರಂಪರೆಯನ್ನು ಕಾಣುವ ಕಂಬಳವನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.

ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್‌ಜೂನಿಯರ್ ವಿಭಾಗದಲ್ಲಿ 40 ಜತೆ ಒಟ್ಟು 70 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಕೋಣಗಳ ಸ್ಪರ್ಧೆ ಮುಗಿದ ಬಳಿಕ ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಕಂಬಳ ಸಂಪನ್ನಗೊಂಡಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಪಿ. ಜಗದೀಶ ಅಧಿಕಾರಿ, ಕಾಪು ತಾ. ಯುವಜನ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಶಿರ್ವ ಪಿಡಿಒ ಅನಂತಪದ್ಮನಾಭ ನಾಯಕ್, ಕಾರ್ಯದರ್ಶಿ ಚಂದ್ರಮಣಿ, ಗ್ರಾಮ ಆಡಳಿತಾಧಿಕಾರಿ ಶ್ವೇತಾ ಸುವರ್ಣ, ರತನ್ ಕುಮಾರ್ ಶೆಟ್ಟಿ, ಕೆ.ಆರ್. ಪಾಟ್ಕರ್, ಪಿಲಾರು ಸುಧಾಕರ ಅಂಡ್ರಿಯಾಲ್, ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ, ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ, ಸಚ್ಚಿದಾನಂದ ಹೆಗ್ಡೆ, ಪ್ರಶಾಂತ ಶೆಟ್ಟಿ ಸೂಡ, ಎಸ್.ಕೆ.ಸಾಲಿಯಾನ್,ವಿಲ್ಸನ್ ಕುಂದರ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅಟ್ಟಿಂಜೆ ಸುಧೀರ್ ಶೆಟ್ಟಿ, ಅಟ್ಟಿಂಜೆ ಪ್ರದೀಪ್ ಶೆಟ್ಟಿ, ತಮ್ಮಣ್ಣ ಪೂಜಾರಿ, ಸುರೇಂದ್ರ ಪೂಜಾರಿ ಕೊಪ್ಪಲ, ವೀರೇಂದ್ರ ಪೂಜಾರಿ, ಶಿರ್ವ ನಡಿಬೆಟ್ಟು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article