ಕುಂದಾಪುರ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣೆ

ಕುಂದಾಪುರ ವಕೀಲರ ಸಂಘದಲ್ಲಿ ಸಂವಿಧಾನ ದಿನಾಚರಣೆ

ಜನರು ಇಂದು ಧರ್ಮ, ನೈತಿಕತೆಗಿಂತ ಕಾನೂನಿಗೆ ಹೆದರುತ್ತಾರೆ: ಡಿ.ಆರ್. ವೆಂಕಟ ಸುದರ್ಶನ 


ಕುಂದಾಪುರ: ಇಂದು ಜನರು ಧರ್ಮ ಮತ್ತು ನೈತಿಕತೆಗಳಿಗಿಂತ ಕಾನೂನಿಗೆ ಹೆಚ್ಚು ಹೆದರುತ್ತಾರೆ. ಆದರೆ ಕಾನೂನುಗಳನ್ನು ರಚಿಸಬೇಕಾದರೂ ಒಂದು ಚೌಕಟ್ಟಿರುತ್ತದೆ. ಅದು ಆಯಾ ದೇಶದ ಜನಸಂಖ್ಯೆ, ಅವರ ಜೀವನ ವಿಧಾನ, ಹವಾಮಾನ ಮೊದಲಾದ ಅಂಶಗಳನ್ನು ಹೊಂದಿಕೊಂಡಿರುತ್ತದೆ. ಯಾವುದೇ ಕಾನೂನು ರಚಿಸಬೇಕಾದರೂ ಅದಕ್ಕೊಂದು ಮೂಲಾಧಾರ ಬೇಕು, ಅದೇ ಸಂವಿಧಾನ ಎಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಬೆಂಗಳೂರಿನ ಕರ್ನಾಟಕ ನ್ಯಾಯಿಕ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಿ.ಆರ್. ವೆಂಕಟ ಸುದರ್ಶನ ಹೇಳಿದರು. 

ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಅಭಿಯೋಗ ಇಲಾಖೆ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ನಡೆದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಅವರು ಭಾರತಿಯ ಸಂವಿಧಾನದ ಬಗ್ಗೆ ಮಾತನಾಡಿದರು. 

ಪ್ರಾಚೀನ ಸಮಾಜದಲ್ಲಿ ಧರ್ಮ ಮತ್ತು ನೈತಿಕತೆಯ ಆಧಾರದಲ್ಲಿ ಜನರು ತಕರಾರುಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಸಮಾಜ ಬೆಳೆದಂತೆ ನೈತಿಕ ಮೌಲ್ಯಗಳು ಕುಸಿದಿದ್ದರಿಂದ ಸಮಾಜದ ಸುಸ್ಥಿರತೆಗೆ ಬೇರೆಯದೇ ನಿಯಮಗಳನ್ನು ರೂಪಿಸಬೇಕಾಯಿತು. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಕ್ರೋಢೀಕರಿಸಿ ಸಮಾಜಕ್ಕೆ ಒಂದು ಚೌಕಟ್ಟು ನಿರ್ಮಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಲಾಯಿತು. ಇದರಲ್ಲಿ ದೇಶದ ಆಡಳಿತ ವ್ಯವಸ್ಥೆ, ಜನ ಜೀವನದ ರೀತಿನೀತಿಗಳು, ಅವರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

ಸಂವಿಧಾನ ಒಂದು ಕಾಯಿದೆಯಲ್ಲ. ಅದು ಒಂದು ಸಾರ್ವಭೌಮ ದೇಶದ ಜನತೆ ತಾವು ಹೇಗೆ ಆಡಳಿತ ನಡೆಸಬೇಕು, ಹೇಗೆ ವ್ಯವಸ್ಥೆಗಳನ್ನು ರೂಪಿಸಬೇಕು ಎಂಬ ಬಗ್ಗೆ ತಾವೇ ನಿರ್ಣಯಿಸಿ ರಚಿಸಿಕೊಳ್ಳುವ ಚೌಕಟ್ಟು. 1949 ರ ನವಂಬರ್ 26 ರಂದು ಸಂವಿಧಾನ ರಚನೆಯಾಯಿತು. ಡಾ. ಬಿ ಆರ್ ಅಂಬೇಡ್ಕರರ ನೂರಿಪ್ಪತ್ತೈದನೇ ಜನ್ಮ ದಿನಾಚರಣೆಯಂದು ಭಾರತದ ರಾಷ್ಟ್ರಪತಿಗಳು, ಪ್ರತಿವರ್ಷ ನವಂಬರ್ 26 ರಂದು ಸಂವಿಧಾನ ದಿನವೆಂದು ಆಚರಿಸಬೇಕು ಎಂಬ ಆದೇಶ ಹೊರಡಿಸಿದರು ಎಂದು ಅವರು ವಿವರಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಮಾತನಾಡಿ, ಸಂವಿಧಾನ ಎಂದರೆ ಅದೊಂದು ಗ್ರಂಥವಲ್ಲ, ಅದು ನಮ್ಮ ಜೀವನ ಪಥ ನಿರ್ದೇಶಸುವ ಬೆಳಕಾಗಿದೆ. ಎಲ್ಲಾ ವಯೋಮಾನದವರಿಗೂ ಸ್ಫೂರ್ತಿ, ಉತ್ತೇಜನ ನೀಡುವ ಗ್ರಂಥವಾಗಿದೆ. ಸಾವಿರಾರು ಹೂವುಗಳಲ್ಲಿಗೆ ಜೇನ್ನೊಣಗಳು ಹೋಗಿ ಮಕರಂದ ಹೀರಿ ತಂದು ಸಿಹಿಯಾದ ಜೇನು ತಯಾರಿಸುವಂತೆ ಸಂವಿಧಾನ ರಚನಾ ಸಮಿತಿಯ ತಜ್ಞರ ತಂಡ ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ನಮ್ಮ ದೇಶದ ಜನರಿಗೆ ಒಳಿತಾಗುವ ಅಂಶಗಳನ್ನು ಪೋಣಿಸಿ ಭಾರತೀಯ ಸಂವಿಧಾನವನ್ನು ರಚಿಸಿದ್ದಾರೆ. ಇದು ಸರ್ವ ಧರ್ಮೀಯರಿಗೂ ಶ್ರೇಷ್ಠವಾದ ಗ್ರಂಥ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮವನ್ನು ಬಡಿದೆಬ್ಬಿಸಿ, ಶಾಂತಿ, ಸಹಬಾಳ್ವೆಯ ಪಥ ದರ್ಶಿಸಿ ಸಹಸ್ರ ವರ್ಷಗಳುರುಳಿದರೂ  ಭಾರತ, ಭಾರತೀಯರು ವಿಶ್ವಶ್ರೇಷ್ಠರಾಗುವಂತೆ ಮಾಡುವಂತಹ ಗ್ರಂಥವಿದು ಎಂಬ ವಿವರಣೆ ನೀಡಿದರು.

ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ರಾಜು ಎನ್. ಆರಂಭದಲ್ಲಿ ಸಂವಿಧಾನದ ಪೀಠಿಕೆ ಓದಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮೈಸೂರಿನಲ್ಲಿ ತಮ್ಮ ವಕೀಲಿ ವೃತ್ತಿಯ ಆರಂಭದ ದಿನಗಳಲ್ಲಿ ವೆಂಕಟ ಸುದರ್ಶನ್ ರವರ ಪರಿಚಯದ ಸಂದರ್ಭಗಳನ್ನು ಸ್ಮರಿಸಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ-ನ್ಯಾಯಿಕ ದಂಡಾಧಿಕಾರಿಣಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುಳಾ ಬಿ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ನ್ಯಾಯಿಕ ದಂಡಾಧಿಕಾರಿಣಿ ಶ್ರುತಿಶ್ರೀ ಎಸ್., ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ನ್ಯಾಯಿಕ ದಂಡಾಧಿಕಾರಿಣಿ ರೋಹಿಣಿ ಡಿ., ಸರಕಾರಿ ಅಭಿಯೋಜಕಿ ಉಮಾ, ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಮತ್ತು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪರಿಚಯಿಸಿದರು. ಸಂಘದ ಸದಸ್ಯರಾದ ಶುಭಾಶ್ಚಂದ್ರ ಶೆಟ್ಟಿ, ಎ.ಎಸ್. ಶೆಟ್ಟಿ, ಶ್ಯಾಮಲಾ ಭಂಡಾರಿ, ಸರ್ವೋತ್ತಮ ಶೆಟ್ಟಿ, ಪವಿತ್ರಾ, ಉಮಾ ಮತ್ತು ಕೆ.ಡಿ. ನಾಯಕ್ ಅತಿಥಿಗಳನ್ನು ಗೌರವಿಸಿದರು. ಶ್ರೀನಾಥ ರಾವ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article