ರೈಲಿನಲ್ಲಿ 63 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
Monday, November 18, 2024
ಉಡುಪಿ: ಅವಿನಾಶ್ ಎಂಬವರು ಮುಂಬೈಯಿಂದ ಕುಟುಂಬ ಸಮೇತರಾಗಿ ಉಡುಪಿಗೆ ರೈಲಿನಲ್ಲಿ ಬರುವಾಗ ಅವರ ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ನ. 15ರಂದು ಅವಿನಾಶ್ ಅವರು ಮುಂಬೈಯಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದರು. ಅವರ ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್‌ಕೇಸ್‌ಗಳನ್ನು ಬೀಗ ಹಾಕದೇ ರೈಲಿನ ಸೀಟಿನ ಕೆಳಗೆ ಇಟ್ಟಿದ್ದರು.
ನ. 16ರಂದು ಅವಿನಾಶ್ ಅವರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿ ಬ್ಯಾಗ್ ತೆರೆದು ನೋಡಿದಾಗ 2 ಬ್ಯಾಗಿನಲ್ಲಿ ಇಟ್ಟಿದ್ದ 63 ಲಕ್ಷ ರೂ. ಬೆಲೆಬಾಳುವ 900 ಗ್ರಾಂ ಚಿನ್ನದ ಒಡವೆಗಳು ಕಾಣೆಯಾಗಿರುವುದು ಕಂಡುಬಂದಿದೆ. ಒಡವೆಗಳನ್ನು ಪನ್‌ವೆಲ್‌ನಿಂದ ಕಂಕಾವಲಿ ರೈಲ್ವೆ ನಿಲ್ದಾಣದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುವುದಾಗಿ ಅವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.