
ಕೇಂದ್ರ ಸರಕಾರದ ಯೋಜನೆಯ ಸಾಲಗಳಿಗೆ ವಿಳಂಬ ಕೂಡದು: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಕೇಂದ್ರ ಸರಕಾರದ ಯೋಜನೆಗಳಾದ ವಿಶ್ವಕರ್ಮ, ಸ್ವನಿಧಿ, ಮುದ್ರಾ ಯೋಜನೆ, ಸ್ಟಾರ್ಟ್‌ಅಪ್ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಲು ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಣಿಪಾಲ ರಜತಾದ್ರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಲೀಡ್ ಬ್ಯಾಂಕ್ ಜೊತೆ ವಿಶ್ವಕರ್ಮ ಯೋಜನೆ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಸಾಲ ಸೌಲಭ್ಯ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ 4,465 ಮಂದಿ ಸ್ವನಿಧಿಯ ಮೊದಲ ಹಂತದ ಸಾಲ ಪಡೆದಿದ್ದು, ಎರಡನೇ ಮತ್ತು ಮೂರನೇ ಹಂತದ ಸಾಲ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ಎರಡನೇ ಹಂತದ ಸಾಲ ಸೌಲಭ್ಯವನ್ನು 2,865 ಮಂದಿ ಪಡೆದಿದ್ದಾರೆ. ಮೂರನೇ ಹಂತದ ಸಾಲ ಸೌಲಭ್ಯವನ್ನು 845 ಮಂದಿ ಪಡೆದಿದ್ದಾರೆ. ಪ್ರಥಮ ಹಂತ ಪಡೆದು ಬಾಕಿ ಉಳಿದಿರುವ ಎಲ್ಲರಿಗೂ ಎರಡು ಮತ್ತು ಮೂರನೇ ಹಂತದ ಸಾಲ ಸೌಲಭ್ಯ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನ.8 ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ, ಪ್ರತೀ ಬ್ಯಾಂಕುಗಳಿಂದ ಕನಿಷ್ಠ 100 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಆ ಕಾರ್ಯಕ್ರಮದಲ್ಲಿ ನೀಡಬೇಕೆಂದು ಸೂಚಿಸಿದರು.
ವಿವಿಧ ಬ್ಯಾಂಕುಗಳಿಂದ ಸಾಲ ಮಂಜೂರಾತಿ ಕುರಿತು ಮಾಹಿತಿ ಪಡೆದ ಸಂಸದ ಕೋಟ, ಸಾಲ ನೀಡುವಲ್ಲಿ ಯಾವುದೇ ಹಿಂಜರಿಕೆ ಬೇಡ. ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಕೆಲಸ ಮಾಡಿ ತನ್ನ ಗುರಿ ಸಾಧಿಸಬೇಕೆನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸಾಗಿದೆ. ಈ ಕನಸು ನೆರವೇರಲು ಪ್ರತೀ ಬ್ಯಾಂಕ್ ಸಿಬ್ಬಂದಿಗಳು ಕೆಲಸ ಮಾಡಬೇಕು. ಆಗ ಮಾತ್ರ ಪ್ರಧಾನಮಂತ್ರಿ ಕನಸಿನ ಸ್ವಾವಲಂಬಿ ಭಾರತ ನಿರ್ಮಾ ಸಾಧ್ಯ ಎಂದರು.
ಸಾಲ ನೀಡಲು ಹಿಂಜರಿದಲ್ಲಿ ಸಂಪರ್ಕಿಸಿ:
ಯಾವುದೇ ಬ್ಯಾಂಕ್ ಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ ಸಾಲ ನೀಡಲು ಹಿಂಜರಿದರೆ ನನ್ನನ್ನು ಸಂಪರ್ಕಿಸಿ, ನಾನು ಬ್ಯಾಂಕಿನ ಜೊತೆ ಮಾತಕತೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೆ, ನ.8 ರಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಲೀಡ್ ಬ್ಯಾಂಕ್ ಪ್ರಬಂಧಕ ಹರೀಶ್ ಉಪಸ್ಥಿತರಿದ್ದರು.