
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ 12ನೇ ವರ್ಷದ ಪಾದಯಾತ್ರೆ
ಉಜಿರೆ: ಸರ್ವಧರ್ಮ ಸಮನ್ವಯ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಪರ್ವಕಾಲದಲ್ಲಿ ನಡೆಯಲಿರುವ ಲಕ್ಷದೀಪೋತ್ಸವ ಸಂದರ್ಭದಲ್ಲಿ ಜ್ಯೋತಿರ್ಮಯವಾಗಿ ಕಂಗೊಳಿಸುವ ಶ್ರೀ ಸ್ವಾಮಿಯ ದಿವ್ಯ ದರ್ಶನಕ್ಕಾಗಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತರ 12ನೇ ವರ್ಷದ ಭಕ್ತಿ ಭಜನೆಯ ಪಾದಯಾತ್ರೆಗೆ ನ.26 ರಂದು ಅಪರಾಹ್ನ ಉಜಿರೆಯಲ್ಲಿ ಚಾಲನೆ ನೀಡಲಾಯಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಅರ್ಚಕ ವೇ.ಮೂ. ರಾಮಚಂದ್ರ ಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಧ್ವಜಸ್ತಂಭದ ಬಳಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪಪ್ರಜ್ವಲಿಸಿ, ಈಡುಗಾಯಿ ಒಡೆದು ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜಾ, ಪೂರನ್ ವರ್ಮಾ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನ ಪ್ರಾಂಗಣದಲ್ಲಿ ಶ್ರೀ ಸತ್ಯ ಸಾಯಿ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಉಜಿರೆಯ ವೃತ್ತದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಆಂಜನೇಯ ಸಹಿತ ಕಾರ್ಯಕರ್ತರಿಂದ ನೃತ್ಯ ಭಜನೆ ನಡೆಯಿತು. ಸ್ವಯಂಸೇವಕರಾಗಿ ಶೌರ್ಯ ತಂಡದವರು ಪಾದಯಾತ್ರೆಯಲ್ಲಿ ಪಾನೀಯದ ವ್ಯವಸ್ಥೆ ಕಲ್ಪಿಸಿದ್ದರು.
ಶ್ರೀ ಕ್ಷೇತ್ರದ ಭಕ್ತರು, ಅಭಿಮಾನಿಗಳು, ಹಿತೈಷಿಗಳು, ಊರ ಪರವೂರ ಭಕ್ತಾದಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ತಾಲೂಕಿನ ಭಜನಾ ಮಂಡಳಿಯ ಭಜಕರು ‘ಓಂ ನಮಃಶಿವಾಯ’, ಶಿವಪಂಚಾಕ್ಷರಿ ಮಂತ್ರ ಪಠಣ,ಭಕ್ತಿ ಭಜನೆಯ ಮೂಲಕ ಸಮವಸ್ತ್ರಧಾರಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಶಿಸ್ತುಬದ್ಧವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಹಸ್ರ ಸಹಸ್ರ ಮಂದಿ ಭಕ್ತಾದಿಗಳು ಯಾವುದೇ ಮತ-ಧರ್ಮ-ಪಂಥಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಭಕ್ತಿಭಾವಪರವಶರಾಗಿ ಪಾದಯಾತ್ರೆಯಲ್ಲಿ ಸಾಗಿ ಬಂದರು.
ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ವೆಂಕಟ್ರಾವ್ ಅಡೂರು, ಸಿರಿ ಎಂ.ಡಿ. ಜನಾರ್ದನ ಕೆ.ಎನ್., ಯೋಗೀಶ್ ನಡಕರ, ರವಿ ಚೆಕ್ಕಿತ್ತಾಯ, ಪಾಂಡುರಂಗ ಬಾಳಿಗಾ, ಪುಷ್ಪಾವತಿ ಆರ್. ಶೆಟ್ಟಿ, ಮೋಹನ ಶೆಟ್ಟಿಗಾರ್, ಬಿ.ಕೆ. ಧನಂಜಯ ರಾವ್, ರವೀಂದ್ರ ಶೆಟ್ಟಿ ಬಳಂಜ, ಡಾ. ಎಲ್.ಎಚ್. ಮಂಜುನಾಥ್, ಅನಿಲ್ ಕುಮಾರ್ ಎಸ್.ಎಸ್., ಡಾ. ಕುಮಾರ ಹೆಗ್ಡೆ, ಡಾ. ವಿಶ್ವನಾಥ್, ಅನಂತ ಭಟ್ ಮಚ್ಚಿಮಲೆ, ಸಂಪತ್ ರತ್ನ ರಾವ್, ಡಾ. ಶ್ರೀಧರ ಭಟ್, ಲಕ್ಷ್ಮಣ ಸಪಲ್ಯ, ಸಂಪತ್ ಸುವರ್ಣ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಡಾ. ಎಮ್.ಎಂ. ದಯಾಕರ್, ಜೀವಂಧರ್ ಕುಮಾರ್, ರಮೇಶ್ ಶೆಟ್ಟಿ, ಕಾಸಿಂ ಮಲ್ಲಿಗೆಮನೆ, ಪ್ರಶಾಂತ್ ಜೈನ್, ರಾಮಣ್ಣ ಗೌಡ, ಸತ್ಯನಾರಾಯಣ ಎರ್ಕಾಡಿತ್ತಾಯ ಮತ್ತು ತಾಲೂಕಿನ ಸಹಸ್ರಾರು ಭಕ್ತಾದಿಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.