
ನ.26 ರಿಂದ ಡಿ.1 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
ಉಜಿರೆ: ನಾಡಿನ ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸಡಾ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನ.26 ರಿಂದ ಡಿ.1 ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಧಾರ್ಮಿಕ:
ಶ್ರೀ ಮಂಜುನಾಥ ಸ್ವಾಮಿಗೆ ನ.26 ರಂದು ಹೊಸಕಟ್ಟೆ ಉತ್ಸವ. ನ.27 ರಂದು ಕೆರೆಕಟ್ಟೆ ಉತ್ಸವ. ನ.28 ರಂದು ಲಲಿತೋದ್ಯಾನ ಉತ್ಸವ. ನ.29 ರಂದು ಕಂಚಿಮಾರುಕಟ್ಟೆ ಉತ್ಸವ. ನ.30 ರಂದು ಗೌರಿಮಾರುಕಟ್ಟೆ ಉತ್ಸವ(ಲಕ್ಷದೀಪೋತ್ಸವ). ಡಿ.1 ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣಪೂಜೆ ನಡೆದು ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳಲಿದೆ.
ಪಾದಯಾತ್ರೆ:
ನ.26 ರಂದು ಮಂಗಳವಾರ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಸಮಸ್ತ ಭಕ್ತಾದಿಗಳ ಭಕ್ತಿ,ಭಜನೆಯ ಪಾದಯಾತ್ರೆ ನಡೆಯಲಿದ್ದು, 25,000ಕ್ಕೂ ಮಿಕ್ಕಿ ಊರ-ಪರವೂರಿನ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪ್ರಾರ್ಥನೆ ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ನೇತೃತ್ವದಲ್ಲಿ 12ನೇ ವರ್ಷದ ಪಾದಯಾತ್ರೆ ನಡೆಯಲಿದೆ.
ರಾಜ್ಯಮಟ್ಟದ ವಸ್ತುಪ್ರದರ್ಶನ:
ನ.26 ರಿಂದ 30ರ ವರೆಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು, ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಮಿಕ್ಕಿ ವ್ಯಾಪಾರ ಮಳಿಗೆಗಳು ಜನರನ್ನು ಆಕರ್ಷಿಸುತ್ತವೆ. ಜತೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಂಗೀತ, ನೃತ್ಯ, ಯಕ್ಷಗಾನ, ವೈವಿಧ್ಯಮಯ ಕಾರ್ಯಕ್ರಮಗಳು ಪ್ರತಿ ಸಂಜೆ 6 ರಿಂದ ರಾತ್ರಿ 10ರವರೆಗೂ ಮನರಂಜನೆ ನೀಡಲಿವೆ.
ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ:
ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನ.28 ರಂದು ಲಲಿತಕಲಾ ಗೋಷ್ಠಿ, ನ.29 ರಂದು ಸಂಜೆ 4 ಗಂಟೆಯಿಂದ ಸರ್ವಧರ್ಮ ಸಮ್ಮೇಳನ ಹಾಗೂ ನ.30 ರಂದು ಸಂಜೆ 4 ಗಂಟೆಯಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.