ನಾಯಕತ್ವ ಗುಣದೊಂದಿಗೆ ವ್ಯಕ್ತಿತ್ವ ಬೆಳೆಯಲಿ: ಡಾ. ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ನಮ್ಮಲ್ಲಿರುವ ಶಕ್ತಿ, ಸ್ವಾಭಿಮಾನವನ್ನು ಸಮಾಜ ಗುರುತಿಸುವಂತೆ ಕೆಲಸ ಮಾಡಬೇಕು. ನಾಯಕತ್ವದೊಂದಿಗೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ರೋಟರಿ ಕ್ಲಬ್ ಸೂಕ್ತ ವೇದಿಕೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ನ.17 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಜರಗಿದ ರೋಟರಿ ಜಿಲ್ಲಾ ಇಂಟರಾಕ್ಟ್ ಸಮ್ಮೇಳನ ‘ಯುತ್ ಕಾರ್ನಿವಲ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆಗಾಗಿರುವ ರೋಟರಿಯ ಧ್ಯೇಯೋದ್ಧೇಶ ಅರಿತುಕೊಂಡರೆ ಜೀವನದಲ್ಲಿ ಯಶಸ್ಸು ಪಡೆಯಬಹುದು. ಪ್ರಾಥಮಿಕ ಹಂತದಲ್ಲಿ ನಾವು ಪಡೆದಂತಹ ಉತ್ತಮ ಅವಕಾಶಗಳನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಂಡು ಇತರರಿಗೂ ಹಂಚಿ, ಸಮಾಜಕ್ಕೆ ಸಂಸ್ಕೃತಿ, ಸಂಸ್ಕಾರವನ್ನು ನೀಡಿ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ಮಾಡುವ ಸಣ್ಣ ಸೇವೆಗಳೇ ಭವಿಷ್ಯದಲ್ಲಿ ಉತ್ತಮ ಸೇವೆಗಳನ್ನು ನೀಡಲು ಪ್ರೇರಣೆಯಾಗುತ್ತವೆ. ಭಗವಂತ ಕೊಟ್ಟಿರುವ ದೇಹದಲ್ಲಿ ನಮ್ಮ ಸ್ಮೃತಿ ಅಡಗಿರುತ್ತದೆ, ಅದನ್ನು ಸದ್ವಿನಿಯೋಗ ಗೊಳಿಸಬೇಕು. ಯುವಕರಲ್ಲಿ ಶಕ್ತಿ, ಪ್ರತಿಭೆ ಹಾಗೂ ವ್ಯಕ್ತಿತ್ವವಿದೆ. ಸಮಾಜ ಸೇವೆ ಮಾಡುವ ಮೂಲಕ ಸಮಾಜಕ್ಕೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ನಿಯೋಜಿತ ರೋಟರಿ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ಭಗವಂತ ನೀಡಿದ ಬದುಕನ್ನು ರೂಪಿಸಿಕೊಳ್ಳುವ ಅವಕಾಶ ನಮ್ಮಲ್ಲಿದೆ. ಗುರುಹಿರಿಯರನ್ನು, ಪೋಷಕರನ್ನು, ಸಮಾಜ, ದೇಶಕ್ಕೆ ಹಿತ ಬಯಸುವವರನ್ನು ಸದಾ ಗೌರವಿಸಬೇಕು. ರೋಟರಿ ಮೌಲ್ಯಧಾರಿತ ಜೀವನ,ನಾಯಕತ್ವ ಗುಣವನ್ನು ರೂಪಿಸುತ್ತದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಪ್ರಸ್ತಾವಿಸಿ, 1905ರಲ್ಲಿ ಆರಂಭವಾದ ರೋಟರಿ ಕ್ಲಬ್ ಇಂದು 220 ದೇಶಗಳಿಗೆ ವಿಸ್ತರಿಸಿದ್ದು, 3500 ಕ್ಲಬ್, 11.50 ಲಕ್ಷ ಸದಸ್ಯರನ್ನು ಹೊಂದಿದೆ. ಅನೇಕ ಸಮಾಜ ಸೇವೆಗಳಿಗೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು.
ಚುನಾಯಿತ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ಜಿಲ್ಲಾ ಇಂಟರಾಕ್ಟ್ ಅಧ್ಯಕ್ಷೆ ಲಿಖಿತಾ ಸಾಲಿಯಾನ್, ಜಿಲ್ಲಾ ಕೌನ್ಸಿಲರ್ ದೇವದಾಸ ರೈ, ರೋಟರಿ ಸಹಾಯಕ ಗವರ್ನರ್ ಜಿ. ಮಹಮ್ಮದ್ ಒಳವೂರು, ಜಯರಾಮ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಜಿಲ್ಲಾ ಇಂಟರಾಕ್ಟ್ ಚೇರ್ಮನ್ ಡಾ. ಜಯಕುಮಾರ್ ಶೆಟ್ಟಿ, ವಲಯ ಸೇನಾನಿ ಮನೋರಮಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ಕುನಾಲ್ ಎಸ್.ಎಚ್. ಮತ್ತು ವರ್ಷಾ ಎಂ. ಅವರನ್ನು ಪುರಸ್ಕರಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಸ್ವಾಗತಿಸಿದರು. ಕಾರ್ಯದರ್ಶಿ ಸಂದೇಶ್ ರಾವ್ ವಂದಿಸಿ, ಧನಂಜಯ ರಾವ್ ಮತ್ತು ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
