ಕೆಲ ಮನೆಗಳ ಬಾವಿಯಲ್ಲಿ ಇಂಧನ ಮಿಶ್ರಿತ ಗೊಂಡ ದುರ್ವಾಸನೆಯುಕ್ತ ನೀರು
ಉಳ್ಳಾಲ: ಮುಡಿಪು ಸಮೀಪದ ಸಾಂಬಾರ ತೋಟಿ ಎಂಬಲ್ಲಿ ಕೆಲವು ಮನೆಗಳ ಕೊಳವೆ ಬಾವಿ ಹಾಗೂ ಬಾವಿಯನೀರು ಇಂಧನ ಮಿಶ್ರಿತ ಗೊಂಡ ರೀತಿಯಲ್ಲಿ ದುರ್ವಾಸನೆ ಬೀರುತ್ತಿದ್ದು, ಇದರಿಂದ ಕುಡಿಯುವ ನೀರು ಇಲ್ಲದೆ ಕುಟುಂಬ ಆತಂಕಿತ ರಾಗಿದ್ದಾರೆ. ಈ ನೀರು ಪೆಟ್ರೋಲ್ ದುರ್ವಾಸನೆ ಬೀರುತ್ತಿದ್ದು, ಬಿಸಿ ಮಾಡಿದರೆ ಬಣ್ಣ ಬದಲಾಗುತ್ತದೆ. ಆರಂಭದಲ್ಲಿ ಒಂದು ಮನೆಯ ಬಾವಿ ಮತ್ತು ಕೊಳವೆ ಬಾವಿ ನೀರು ದುರ್ವಾಸನೆ ಬೀರುತ್ತಿತ್ತು. ಈಗ ಆರು ಮನೆಗಳ ಮನೆಯ ಬಾವಿ ಹಾಗೂ ಕೊಳವೆ ಬಾವಿಗೆ ಈ ಸಮಸ್ಯೆ ಪಸರಿಸಿ ನೀರು ಕುಡಿಯಲಾದ ಸ್ಥಿತಿಯಲ್ಲಿ ಇದೆ.
ಸಾಂಬಾರ ತೋಟಿ ನಿವಾಸಿ ಎಸ್ಕೆ ಖಾದರ್ ಹಾಜಿ, ಅಬ್ದುಲ್ ಹಮೀದ್ ಸಹಿತ ಐದಕ್ಕೂ ಹೆಚ್ಚು ಮನೆಗಳ ಬಾವಿ ಹಾಗೂ ಕೊಳವೆ ಬಾವಿ ನೀರು ಹಾಳಾಗಿದ್ದು, ನೀರಿಗೆ ಇಂಧನ ಮಿಶ್ರಣ ಆಗಿ ಈ ರೀತಿ ದುರ್ವಾಸನೆ ಬೀರುತ್ತಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ತೊಂದರೆಗೊಳಗಾದ ಕುಟುಂಬ ಈ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರಿ ಕೊಣಾಜೆ ಠಾಣೆಗೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ.ಪಜೀರ್ ಗ್ರಾ.ಪಂ.ಗೆ ದೂರು ನೀಡಿದೆ.
ನೀರು ಕುಡಿಯಲು ಆಗದ ಸ್ಥಿತಿಯಲ್ಲಿ ಇದ್ದ ಕಾರಣ ಊರವರೇ ನೀರನ್ನು ಮೂರು ಕಡೆ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷೆ ಮಾಡಿಸಿದ್ದಾರೆ. ಬುಧವಾರ ಜಿ.ಪಂ.ನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬೈಕಂಪಾಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೂ ದೂರು ನೀಡಿದ್ದಾರೆ.
ಆರು ತಿಂಗಳಿಂದ ಸಮಸ್ಯೆ:
ನಮ್ಮ ಮನೆಯಲಿ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಕೊಳವೆ ಬಾವಿ ನೀರು ಇಂಧನ ಮಿಶ್ರಿತ ದುರ್ವಾಸನೆ ಬೀರುತ್ತಿರುವುದರಿಂದ ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿ ಇದೆ. ಈ ಬಗ್ಗೆ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ರೀತಿಯ ಸಮಸ್ಯೆ ಆರು ಮನೆಗಳಲ್ಲಿ ಇದೆ. ಇದಕ್ಕೆ ಪರಿಹಾರ ಏನು ಎಂಬುದು ಗೊತ್ತಾಗಬೇಕು ಎಂದು ಎಸ್.ಕೆ. ಖಾದರ್ ಹಾಜಿ ತಿಳಿಸಿದ್ದಾರೆ.
ಅಧಿಕಾರಿಗಳು ಬಂದರೂ ಪರಿಹಾರವಿಲ್ಲ:
ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ಜಿಲ್ಲಾಧಿಕಾರಿ, ಪರಿಸರ ಇಲಾಖೆಯ ಅಧಿಕಾರಿಗೆ, ಉಸ್ತುವಾರಿ ಸಚಿವರಿಗೆ, ವಿಧಾನಸಭಾ ಅಧ್ಯಕ್ಷರಿಗೆ, ತಹಶೀಲ್ದಾರರಿಗೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಜೀರು ಗ್ರಾ.ಪಂ.ಗೆ ತೆರಳಿ ಸಮಸ್ಯೆ ಪರಿಹಾರ ಕ್ರಮಕ್ಕೆ ಒತ್ತಾಯಿಸಿದ್ದರು. ಸ್ಪೀಕರ್ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಉಳ್ಳಾಲ ತಹಶೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್, ಪಜೀರು ಪಂ.ಅಧ್ಯಕ್ಷ ರಫೀಕ್, ಕುರ್ನಾಡು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳೀಯ ಪೆಟ್ರೋಲ್ ಪಂಪ್ನಲ್ಲಿ ಬಸ್ ಹಾಗೂ ಇತರ ವಾಹನಗಳನ್ನು ತೊಳೆಯದಂತೆ ಸೂಚನೆ ನೀಡಲು ಸ್ಥಳೀಯ ಪಂಚಾಯತ್ಗೆ ಆದೇಶ ನೀಡಿದ್ದಾರೆ. ಒಂದು ವಾರದ ಬಳಿಕ ನೀರಿನ ಪರೀಕ್ಷೆ ಮಾಡಿ ಸಮಸ್ಯೆ ಮುಂದುವರಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗ ತುಂಬಾ ಸಮಸ್ಯೆ ಇರುವ ಮನೆಗೆ ಪಂಚಾಯತ್ನಿಂದ ಪೈಪ್ಲೈನ್ ಅಳವಡಿಸಲು ಸೂಚಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ತಿಳಿಸಿದ್ದಾರೆ.