ಕೃಷ್ಣ ಅಗಲಿಕೆ ಅಘಾತ ತಂದಿದೆ: ರೈ
ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಮಂತ್ರಿಯಾಗಿ ಹಲವು ಕಾರ್ಯಕ್ರಮ ನೀಡಿದ ಎಸ್‌ಎಂ ಕೃಷ್ಣ ಅವರ ಅಗಲಿಕೆ ಮನಸ್ಸಿಗೆ ಅಘಾತವನ್ನು ತಂದಿದೆ ಎಂದು ಮಾಜಿ ಸಚಿವ, ಕೃಷ್ಣ ಅವರ ಸಂಪುಟದಲ್ಲೂ ಸಚಿವರಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಸೋತಿದ್ದ ಸಂದರ್ಭ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಪಾಂಚಜನ್ಯ ಕಾರ್ಯಕ್ರಮ ಹಮ್ಮಿಕೊಂಡು ಪಕ್ಷಕ್ಕೆ ಪುನಶ್ಚತನ ನೀಡಿದ್ದ ಎಸ್‌ಎಂ ಕೃಷ್ಣ ಅವರು, ಶಿಸ್ತಿನ ರಾಜಕಾರಣ ಮಾಡಿದ ಓರ್ವ ಜಂಟಲ್ ಮ್ಯಾನ್ ಪೊಲಿಟಿಶಿಯನ್ ಆಗಿದ್ದರು ಎಂದು ರೈ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬುದ್ದಿವಂತರ ಜಿಲ್ಲೆ ಎಂಬ ಕಾರಣಕ್ಕೆ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲೆ ಮೇಲೆ ವಿಶೇಷ ಪ್ರೀತಿ-ಅಭಿಮಾನ ಹೊಂದಿದ್ದರು. ಕೃಷ್ಣ ಅವರ ಸಂಪುಟದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವನಾಗಿದ್ದು ಬಳಿಕ ಸಂಪುಟ ವಿಸ್ತರಣೆ ಸಂದರ್ಭ ನನಗೆ ಸಾರಿಗೆ ಇಲಾಖೆಯ ಹೊಣೆ ನೀಡಿದ್ದರು.
ನಾನು ಮಂತ್ರಿಯಾಗಿದ್ದ ಸಂದರ್ಭ ಅಲ್ಲದೆ ರಾಜಕೀಯ ಜೀವನದಲ್ಲೂ ಅವರ ಜೊತೆ ಅತ್ಯುತ್ತಮ ಒಡನಾಟ, ಸಂಬಂಧ ಹೊಂದಿದ್ದೆ. ಅವರಿಗೂ ನನ್ನ ಮೇಲೆ ವಿಶೇಷ ಅಭಿಮಾನ ಇತ್ತು. ಮುತ್ಸದ್ದಿ ರಾಜಕಾರಣಿ ಕೃಷ್ಣ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಮಾನಾಥ ರೈ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.