ಕುಕ್ಕೆ: ನಾಳೆ ಕೊಪ್ಪರಿಗೆ ಇಳಿಯುವುದು: ನೀರಿನಲ್ಲಿ ಬಂಡಿ ಉತ್ಸವ
Wednesday, December 11, 2024
ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂತಿಮ ದಿನವಾದ ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೋತ್ಸವವು ಸಮಾಪನಗೊಳ್ಳಲಿದೆ. ಈ ಪ್ರಯುಕ್ತ ವಿಶಿಷ್ಠವಾದ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ.
ಬೆಳಗ್ಗೆ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಇಳಿಸಲಾಗುವುದು. ಮಧ್ಯಾಹ್ನದ ಮಹಾಪೂಜೆಯ ನಂತರ ಶ್ರೀ ದೇವಳದ ಹೊರಾಂಗಣದ ಸುತ್ತ ನೀರನ್ನು ಶೇಖರಿಸಲು ಆರಂಭಿಸಲಾಗುವುದು. ರಾತ್ರಿ ಮಹಾಪೂಜೆಯ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ನೀರು ತುಂಬಿದ್ದ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುವುದು.
ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಅತ್ಯಂತ ವಿಶಿಷ್ಠವಾದ ಈ ಉತ್ಸವದೊಂದಿಗೆ ಶ್ರೀ ದೇವರ ಜಾತ್ರೋತ್ಸವ ಕೊನೆಯಾಗಲಿದೆ. ಈ ಬಳಿಕ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆಯುತ್ತದೆ. ಉತ್ಸವದ ಬಳಿಕ ಶ್ರೀ ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಲಿದೆ.ಶುಕ್ರವಾರ ಮುಂಜಾನೆ ಪುರುಷರಾಯ ದೈವವು ಕುಮಾರಧಾರದ ಮತ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಆಹಾರ ನೀಡಲಿದೆ.