
ಸರಕಾರಿ ಶಾಲೆಯ ಹೂ ಕುಂಡ ಪುಡಿಗೈದ ದುಷ್ಕರ್ಮಿಗಳು
ಬೆಳ್ತಂಗಡಿ: ಸರಕಾರಿ ಶಾಲೆಯ ಮಕ್ಕಳು ಶ್ರಮಿಸಿ, ಬೆಳೆಸಿದ ಹೂ ಗಿಡಗಳ ಕುಂಡಗಳನ್ನು ಪುಡಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಮಾಜಿ ಪ್ರಧಾನಿ ನಿಧನರಾದ ಬಗ್ಗೆ ಸರಕಾರಿ ರಜೆಯಿದ್ದ ಕಾರಣ, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳು ನೆಟ್ಟು ಬೆಳಿಸಿದ ಹೂ ತೋಟವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.
ಗುರುವಾಯನಕೆರೆ-ಕಾರ್ಕಳ ಹೆದ್ದಾರಿ ರಸ್ತೆ ಪಕ್ಕದಲ್ಲೇ ಇರುವ ಈ ಸುಂದರ ಶಾಲೆಗೆ ಶಿಕ್ಷಕರು, ಮಕ್ಕಳು, ಅಭಿವೃದ್ಧಿ ಸಮಿತಿಯವರು, ಹಳೇ ವಿದ್ಯಾರ್ಥಿಗಳ ಸಂಘದವರು, ಊರ ವಿದ್ಯಾಭಿಮಾನಿಗಳು, ಈ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿರುತ್ತಾರೆ.
ಸರಕಾರಿ ಶಾಲೆಗೆ ಇಂತಹ ನೀಚ ಕೆಲಸ ಮಾಡುವುದರಿಂದ ಕಿಡಿಗೇಡಿಗಳಿಗೆ ಏನು ಲಾಭ. ಇಲ್ಲಿ ಮಕ್ಕಳು ತರಕಾರಿ ಗಿಡ, ಹಣ್ಣಿನ ಗಿಡಗಳನ್ನು ಕೂಡ ಬೆಳೆಸಿದ್ದಾರೆ. ಅದರ ಮೇಲೂ ಕಿಡಿಗೇಡಿಗಳ ಕಣ್ಣು ಬೀಳುವ ಸಾಧ್ಯತೆ ಇದೆ ಎಂಬ ಭಯದಿಂದ ಶಾಲಾ ಶಿಕ್ಷಕ ವೃಂದ ನಮಗೆ ರಕ್ಷಣೆ ಬೇಕು ಎಂದಿದ್ದಾರೆ.
ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.