
ನಾಪತ್ತೆಯಾದ ಯುವಕ ಕೊಲೆಯಾಗಿ ಪತ್ತೆ: ಸ್ನೇಹಿತನಿಂದಲೇ ಹತ್ಯೆ
ಕಡಬ: ಯುವಕನೊಬ್ಬನನ್ನು ಆತನ ಸ್ನೇಹಿತನೇ ಕಾಡಿಗೆ ಕೊಂಡೊಯ್ದು ಕೊಲೆ ಮಾಡಿದ್ದಲ್ಲದೆ, ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಸಂದೀಪ್ ಗೌಡ(29) ಕೊಲೆಯಾದವರು.
ಸುಬ್ರಹ್ಮಣ್ಯ ಬಳಿಯ ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 1.5 ಕಿಮೀ ದೂರದ ನಾರಡ್ಕ ಎಂಬಲ್ಲಿನ ಕಾಡಿನ ಮಧ್ಯೆ ಯುವಕನ ಮೃತದೇಹ ಅರೆಬರೆ ಸುಟ್ಟ, ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಬ ಪೊಲೀಸರ ತನಿಖೆಯಲ್ಲಿ ಇದೊಂದು ಕೊಲೆ ಕೃತ್ಯ ಎನ್ನುವುದು ತಿಳಿದುಬಂದಿದೆಯಲ್ಲದೆ, ಆರೋಪಿಯನ್ನು ಬಂಧಿಸಿದ್ದಾರೆ.
ಸಂದೀಪ್ ಗೌಡ ಮರ್ದಾಳ ಪೇಟೆಯಲ್ಲಿ ವಿನಯ ಎಂಬವರ ಜೊತೆಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದ. ನ.೨೭ರಂದು ಕೆಲಸಕ್ಕೆ ತೆರಳಿದ್ದ ಸಂದೀಪ್ ಅಂದು ಸಂಜೆ ಮನೆಗೆ ಬಂದಿರಲಿಲ್ಲ. ತಾಯಿ ವಿನಯ್ ಜೊತೆಗೆ ವಿಚಾರಿಸಿದಾಗ, ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ಜೊತೆಗೆ ಕಾರಿನಲ್ಲಿ ತೆರಳಿದ್ದಾಗಿ ಮಾಹಿತಿ ನೀಡಿದ್ದ. ಈ ಬಗ್ಗೆ ತಾಯಿ ಸರೋಜ ಕಡಬ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಈ ನಡುವೆ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ, ಸಂದೀಪ್ ಕೊಲೆಯಾಗಿದ್ದಾನೆ ಎಂಬ ವದಂತಿ ಹರಡಿತ್ತು. ಆದರೆ ಪೊಲೀಸರು ಸರಿಯಾದ ಮಾಹಿತಿ ನೀಡಿರಲಿಲ್ಲ.
ಕೊಲೆಯಾದ ಸಂದೀಪ್ ಬಿಜೆಪಿ ಕಾರ್ಯಕರ್ತನಾಗಿದ್ದು, ನಾಪತ್ತೆ ವಿಚಾರ ಭಾರೀ ಗೊಂದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮಧ್ಯಪ್ರವೇಶಿಸಿದ್ದರು. ಭಾನುವಾರ ಬೆಳಗ್ಗೆ ಬಿಜೆಪಿ ಮುಖಂಡರು, ಸಂದೀಪ್ ಕುಟುಂಬಸ್ಥರು ಕಡಬ ಠಾಣೆಯ ಮುಂಭಾಗದಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದು, ಒಟ್ಟು ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಆಗಮಿಸಿ, ಪೊಲೀಸರ ಜೊತೆಗೆ ಮಾತುಕತೆ ನಡೆಸಿ ತನಿಖೆಗೆ ಆಗ್ರಹ ಮಾಡಿದ್ದಾರೆ. ಕೊಲೆ ಆರೋಪಿಯನ್ನು ಠಾಣೆಯಲ್ಲಿ ಇಟ್ಟುಕೊಂಡು ಪೊಲೀಸರು ಕಾಲಹರಣ ಮಾಡುತ್ತಿದ್ದಾರೆ. ಯಾವುದೋ ಪ್ರಭಾವಕ್ಕೆ ಮಣಿದು ಆರೋಪಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಭಾನುವಾರ ಸಂಜೆ ಕಡಬ ಪೊಲೀಸರು ಆರೋಪಿ ಎನ್ನಲಾಗುತ್ತಿದ್ದ ಪ್ರತೀಕ್‌ನನ್ನು ನೆಟ್ಟಣಕ್ಕೆ ಕರೆತಂದು ಕೊಲೆಗೈದು ಸುಟ್ಟು ಹಾಕಿದ್ದ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ಪೊಲೀಸರನ್ನು ಅಡ್ಡಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ತಮ್ಮ ವಶಕ್ಕೆ ನೀಡಿ, ಇದು ಒಬ್ಬನಿಂದಲೇ ಆಗಿರುವ ಕೊಲೆಯಲ್ಲ. ಕೊಲೆಗೈದು ರಸ್ತೆಯಿಂದ ಒಂದೂವರೆ ಕಿಮೀ ದೂರದ ಕಾಡಿಗೆ ಹೊತ್ತೊಯ್ದಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಕೃತ್ಯದಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಎಲ್ಲರನ್ನೂ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಯುವಕನ ಕೊಲೆ ಪ್ರಕರಣದಲ್ಲಿ ಗಾಂಜಾ ಬೆಳೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಜನರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಹಣಕಾಸು ದ್ವೇಷದಲ್ಲಿ ಪ್ರತೀಕ್ ಕೊಲೆ ಮಾಡಿದ್ದಾನೆ ಎಂದೂ ಹೇಳಲಾಗುತ್ತಿದೆ. ನೆಟ್ಟಣ ರೈಲು ನಿಲ್ದಾಣ ಬಳಿಯ ಗುಡ್ಡೆಯಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟು ಹಾಕಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿನೆಲೆ ಭಾಗದ ಕಾಡಿನಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಜನರು ಶಂಕೆ ಮಾಡುತ್ತಿದ್ದಾರೆ. ಯಾಕಾಗಿ ಕೊಲೆ ಕೃತ್ಯವಾಗಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ಪೊಲೀಸರು ಆರೋಪಿ ಪ್ರತೀಕ್ ಮತ್ತೊಬ್ಬನನ್ನು ಬಂಧಿಸಿದ್ದಾರೆ.