
ಹುತಾತ್ಮ ಯೋಧ ಬೀಜಾಡಿ ಅನೂಪ್ ಪೂಜಾರಿ ಹುಟ್ಟೂರ ಕಡಲ ತಡಿಯಲ್ಲಿ ಪಂಚಭೂತಗಳಲ್ಲಿ ಲೀನ
Thursday, December 26, 2024
ಕುಂದಾಪುರ: ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕುಂದಾಪುರ ಸಮೀಪದ ಬೀಜಾಡಿಯ ಅನೂಪ್ ಪೂಜಾರಿ ಪಾರ್ಥಿವ ಶರೀರ ಇಂದು ಮಂಗಳೂರಿಂದ ಬೆಳಗ್ಗೆ ಅವರ ಹುಟ್ಟೂರಾದ ಕುಂದಾಪುರ ತಾಲೂಕು ಕೋಟೇಶ್ವರ ಸಮೀಪದ ಬೀಜಾಡಿಗೆ ಆಗಮಿಸಿತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಬಂದ ಅನೂಪ್ ಪೂಜಾರಿ ಅವರ ಅಂತಿಮ ಯಾತ್ರೆಯು ಸಾಸ್ತಾನ, ಕೋಟ ಹಾಗೂ ತೆಕ್ಕಟ್ಟೆಯಿಂದ ಕೋಟೇಶ್ವರ ಸುತ್ತಿ ಬೀಜಾಡಿಯ ಅವರ ಮನೆ ತಲುಪಿತು.
ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಮಾರ್ಗದುದ್ದಕ್ಕೂ ನೆರೆದ ಜನಸ್ತೊಮ ಹೂವು ಚೆಲ್ಲಿ, ಕಂಬನಿ ಮಿಡಿದು, ಅಗಲಿದ ಯೋಧನಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ ಅವರು ಕಲಿತ ಬೀಜಾಡಿ ಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಆಪ್ತರು, ಸಾರ್ವಜನಿಕರು, ಶಾಲಾ ಮಕ್ಕಳು, ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು. ಅನೂಪ್ ಅಮರ್ ರಹೇ ಎಂಬ ಕೂಗು ಕೇಳಿಬಂದಿತು.
ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅಂತ್ಯಸಂಸ್ಕಾರ ನಡೆಯಿತು. ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಇದಕ್ಕಾಗಿ ಸಿದ್ಧತೆ ಮಾಡಲಾಗಿತ್ತು. ಸಮುದ್ರ ತೀರದಲ್ಲಿ ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಅಂತಿಮ ವಿಧಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಿ ಸರ್ಕಾರಿ ಗೌರವ ಸಲ್ಲಿಸಿದರು. ಇಳಿಹೊತ್ತಿನಲ್ಲಿ ವೀರ ಯೋಧ ಬೀಜಾಡಿ ಅನೂಪ್ ಪೂಜಾರಿಯವರ ಪಾರ್ಥಿವ ಶರೀರವು, ನೆರೆದಿದ್ದ ಸಹಸ್ರಾರು ಮಂದಿಯ ಅಶ್ರು ತರ್ಪಣದೊಂದಿಗೆ ಪಂಚಭೂತಗಳಲ್ಲಿ ಲೀನವಾಯಿತು.
ಕಳೆದ 15ರಂದು ನಡೆದಿದ್ದ ಕೊಡಿಹಬ್ಬಕ್ಕೆ ಅವರು ಊರಿಗೆ ಬಂದಿದ್ದರು. ಕೊಡಿಹಬ್ಬದಲ್ಲಿ ಕುಟುಂಬದವರೊಂದಿಗೆ ತಿರುಗಾಡಿ, ಮಗಳ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಇನ್ನೂ ಹಬ್ಬದ ಅಂಗಡಿ ಮುಂಗಟ್ಟುಗಳನ್ನು ತೆಗೆದಿಲ್ಲ, ಇದೀಗ ಇದೇ ಪ್ರದೇಶದಲ್ಲಿ ಅವರ ಅಂತಿಮ ಯಾತ್ರೆ ನಡೆದುದು ವಿಧಿಯ ಅಟ್ಟಹಾಸ.