ರಜಾ ಸರಣಿ-ಕುಕ್ಕೆ ಕ್ಷೇತ್ರದಲ್ಲಿ ಜನ ಸಂದಣಿ: ಕ್ಷೇತ್ರದಲ್ಲಿ ಜನವೋ ಜನ

ರಜಾ ಸರಣಿ-ಕುಕ್ಕೆ ಕ್ಷೇತ್ರದಲ್ಲಿ ಜನ ಸಂದಣಿ: ಕ್ಷೇತ್ರದಲ್ಲಿ ಜನವೋ ಜನ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಸ್‌ಮಸ್ ರಜೆಯ ದಿನವಾದ ಬುಧವಾರ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದರು. ರಜಾ ಸರಣಿಯ ಕಾರಣದಿಂದ ಸುಬ್ರಹ್ಮಣ್ಯಕ್ಕೆ ಕಳೆದ 4 ದಿನಗಳಿಂದ ಅಧಿಕ ಭಕ್ತರು ಆಗಮಿಸಿದ್ದರು. ಆದಿತ್ಯವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಈ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿರಬಹುದು ಎಂದು ಅಂದಾಜಿಸಲಾಗಿದೆ.

 ಸರತಿ ಸಾಲು:

 ಶ್ರೀ ದೇವರ ದರುಶನಕ್ಕಾಗಿ ಮಾರುದ್ದದ ಸರದಿ ಸಾಲಿನಲ್ಲಿ ಸಾಗಿ ಬಂದು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಲ್ಲಿ ಸುಮಾರು 8 ಸಾಲುಗಳಲ್ಲಿ ಭಕ್ತರು ಶ್ರೀ ದೇವರ ದರುಶನಕ್ಕೆ ತೆರಳಿದರು. ಷಣ್ಮುಖ ಪ್ರಸಾದ ಬೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಬೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿತ್ತು. ಇದರಿಂದಾಗಿ ಭಕ್ತರು ಬೋಜನ ಪ್ರಸಾದ ಸ್ವೀಕರಿಸಲು ವಿಶೇಷ ಅನುಕೂಲತೆ ದೊರಕಿತು. ದೇವಳದ ಸಿಬ್ಬಂಧಿಗಳು ಭಕ್ತರಿಗೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ನೀಡಿದರು.

 ಪುಣ್ಯ ಸ್ನಾನಕ್ಕೂ ಜನವೋ ಜನ:

ಕುಮಾರಧಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಮುಂಜಾನೆ ಭಕ್ತರ ದಂಡೇ ಆಗಮಿಸಿತ್ತು.ಕುಮಾರಧಾರ ಸ್ನಾನಘಟ್ಟವು ಭಕ್ತರಿಂದ ತುಂಬಿ ತುಳುಕಿತ್ತು. ಇಲ್ಲಿ ಭಕ್ತರಿಗೆ ಧ್ವನಿವರ್ಧಕದ ಮೂಲಕ ವಿಶೇಷ ಮಾಹಿತಿಗಳನ್ನು ಬಿತ್ತರಿಸುವ ಕಾರ್ಯವು ನಿರಂತರವಾಗಿ ಶ್ರೀ ದೇವಳದಿಂದ ಮಾಡಲಾಯಿತು. ದೇವಸ್ಥಾನದ ಒಳಾಂಗಣ, ಹೊರಾಂಗಣ, ದೇವಳದ ಕಲ್ಯಾಣ ಮಂಟಪ, ರಥಬೀದಿ, ಆದಿಸುಬ್ರಹ್ಮಣ್ಯ, ಕುಮಾರಧಾರ ಮೊದಲಾದೆಡೆ ಭಕ್ತಸಾಗರವೇ ಕಂಡು ಬಂದಿತ್ತು.ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.ಅಲ್ಲದೆ ಭಕ್ತರು ಸೇವೆ ನೆರವೇರಿಸಲು ಬೇಕಾದ ಅನುಕೂಲತೆಗಳನ್ನು ಮಾಡಿ ಕೊಡಲಾಯಿತು.

 


ದರ್ಶನಕ್ಕೆ ಮಾರುದ್ದದ ಸಾಲು:

 ಬೆಳಗ್ಗೆ 6ಗಂಟೆಯಿಂದಲೇ ಭಕ್ತಾಧಿಗಳು ಮಾರುದ್ದದ ಸರದಿ ಸಾಲಿನಲ್ಲಿ ತೆರಳಿ ದೇವರ ದರುಶನ ಪಡೆದರು. ಶ್ರೀ ದೇವಳದ ಗೋಪುರದ ತನಕ ಭಕ್ತರ ಸಾಲು ಕಂಡು ಬಂತು.ಗೋಪುರದಿಂದಲೇ ಸಾಲಿನ ಮೂಲಕ ಭಕ್ತರು ಶ್ರೀ ದೇವರ ದರುಶನಕ್ಕೆ ತೆರಳಿದರು. ಅದೇ ರೀತಿ ಆದಿ ಸುಬ್ರಹ್ಮಣ್ಯದಲ್ಲಿ ಕೂಡಾ ಶ್ರೀ ದೇವರ ದರುಶನಕ್ಕಾಗಿ ಮಾರುದ್ದದ ಸಾಲು ಕಂಡು ಬಂತು. ಇದಲ್ಲದೆ ಆಶ್ಲೇಷ ಬಲಿ ಸೇವೆಗೆ ಮತ್ತು ಸೇವೆಗಳ ಸಂಕಲ್ಪಕ್ಕಾಗಿ ಕೂಡಾ ಅಧಿಕವಾದ ಸರದಿಯ ಸಾಲು ಕಂಡು ಬಂತು.

ಅನ್ನದಾನ:

 ಕುಕ್ಕೆಯಲ್ಲಿ ಅನ್ನದಾನ ಶ್ರೇಷ್ಠವಾಗಿರುವುದರಿಂದ ಸೋಮವಾರವೂ ದಾಖಲೆ ಪ್ರಮಾಣದಲ್ಲಿ ಭಕ್ತರು ಬೋಜನ ಪ್ರಸಾದ ಸ್ವೀಕರಿಸಿದ್ದಾರೆ. ಷಣ್ಮುಖ ಪ್ರಸಾದ ಬೋಜನ ಶಾಲೆ, ಗಣಪತಿ ದೇವಸ್ಥಾನ, ಶೃಂಗೇರಿ ಮಠ ಮತ್ತು ಆದಿಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ. ಷಣ್ಮುಖ ಪ್ರಸಾದ ಬೋಜನ ಶಾಲೆ ಮತ್ತು ಆದಿ ಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ಸಾಗಿ ಬೋಜನ ಸ್ವೀಕರಿಸಿದರು. ಬೆಳಗ್ಗೆ 10.30ರಿಂದ ಸಂಜೆ 4.30ರ ತನಕ ನಿರಂತರವಾಗಿ ಬೋಜನ ವಿತರಣೆಯಾಯಿತು.ರಾತ್ರಿ 7.30ರಿಂದ 11 ಗಂಟೆಯ ತನಕವೂ ಪ್ರಸಾದ ಬೋಜನವನ್ನು ಭಕ್ತರು ಸ್ವೀಕರಿಸಿದರು.

ಹೆಚ್ಚಿನ ಸೇವೆ:

 ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇವಾಧಿಗಳನ್ನು ನೆರವೇರಿಸಿದರು.ಆಶ್ಲೇಷಬಲಿ, ನಾಗಪ್ರತಿಷ್ಠೆ, ಶೇಷ ಸೇವೆ, ತುಲಾಭಾರ, ಮಹಾಪೂಜೆ, ನಾಗಪ್ರತಿಷ್ಠೆ, ಶೇಷ ಸೇವೆ, ಕಾರ್ತಿಕ ಪೂಜೆಗಳನ್ನು ಅಧಿಕ ಭಕ್ತರು ನೆರವೇರಿಸಿದರು. ಭಕ್ತರೊಂದಿಗೆ ಅವರನ್ನು ಕರೆತಂದ ವಾಹನಗಳ ಸಂಖ್ಯೆಯು ಅಧಿಕವಾಗಿ ಕ್ಷೇತ್ರದಲ್ಲಿ ಕಂಡು ಬಂದಿತ್ತು.ಈ ಕಾರಣದಿಂದಾಗಿ ಬಿಲದ್ವಾರ ಪಾರ್ಕಿಂಗ್, ಸವಾರಿ ಮಂಟಪ ಪಾರ್ಕಿಂಗ್, ಹನುಮಂತ ಗುಡಿ ಸಮೀಪದ ಪಾರ್ಕಿಂಗ್, ಹಳೆಯ ಅರಣ್ಯ ಇಲಾ ಕಚೇರಿ ಬಳಿಯ ಪಾರ್ಕಿಂಗ್, ಅಕ್ಷರಾ ವಸತಿ ಗೃಹದ ಸಮೀಪದ ಪಾರ್ಕಿಂಗ್, ಪ್ರಾಥಮಿಕ ಶಾಲಾ ಆಟದ ಮೈದಾನ, ಆದಿಸುಬ್ರಹ್ಮಣ್ಯ, ವಾಹನಗಳಿಂದ ತುಂಬಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article