
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ್ರೈಸ್ತ ಸಮುದಾಯದ 155 ಮಂದಿಯಿಂದ ಕಮಿಷನರ್ ಗೆ ಮನವಿ
ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ್ರೈಸ್ತ ಸಮುದಾಯದ 155 ಮಂದಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಹಿಯನ್ನು ಹಾಕಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ಮನವಿ ನೀಡಿದ್ದಾರೆ.
ಅನಿಲ್ ಲೋಬೊ ಹಲವರಿಗೆ ಅನ್ಯಾಯ ಮಾಡಿದ್ದಾರೆ. ಮುಗ್ಧ ಮನೋಹರ್ ಪಿರೇರಾ ಸಾವಿಗೆ ನ್ಯಾಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದು ಇದರ ಪ್ರತಿಯನ್ನು ಮುಖ್ಯಮಂತ್ರಿ, ಗೃಹ ಸಚಿವರು, ಸಹಕಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸ್ಪೀಕರ್ ಯುಟಿ ಖಾದರ್ ಗೂ ರವಾನಿಸಿದ್ದಾರೆ.
ಇದೇ ವೇಳೆ, ಘಟನೆ ಬಗ್ಗೆ ಪಾರದರ್ಶಕ ತನಿಖೆಯಾಗಿಸುವ ನಿಟ್ಟಿನಲ್ಲಿ ಪೊಲೀಸ್ ಕಮಿಷನರ್ ಪ್ರಕರಣದ ತನಿಖಾಧಿಕಾರಿಯಾಗಿ ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಅವರನ್ನು ನೇಮಿಸಿದ್ದಾರೆ. ಪ್ರಕರಣ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದರೂ, ಅದರ ತನಿಖೆಯನ್ನು ನಗರ ಠಾಣೆಯ ಇನ್ಸ್ ಪೆಕ್ಟರ್ ಗೆ ವರ್ಗಾಯಿಸಿದ್ದಾರೆ. ನಾಗರಾಜ್ ಅವರು ಅಪರಾಧ ತನಿಖೆಯಲ್ಲಿ ಪಳಗಿದ ಕೈಯಾಗಿದ್ದು, ಪ್ರಕರಣದ ತನಿಖೆ ಶುರು ಮಾಡಿದ್ದಾರೆ.
ಇತ್ತ ದಕ್ಷಿಣ ಕನ್ನಡ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಡಿ.27ರ ಶುಕ್ರವಾರ ನಿಗದಿಯಾಗಿದ್ದ ಜಾಮೀನು ಅರ್ಜಿ ಸರ್ಕಾರಿ ರಜೆ ಘೋಷಣೆಯಾದ ಮುಂದೂಡಿಕೆಯಾಗಿದ್ದು, ಹಿನ್ನೆಲೆಯಲ್ಲಿ ಡಿ.30ರಂದು ಬರಲಿದೆ. ಸದ್ಯ ಜೈಲು ಪಾಲಾಗಿದ್ದರೂ ಮತ್ತೆ ವಿಚಾರಣೆಗೆ ಖಾಸಗಿ ಆಸ್ಪತ್ರೆಯಲ್ಲಿರುವ అనిಲ್ ಲೋಬೊಗೆ ಸರ್ಜರಿ ಅಗತ್ಯವಿದೆಯೆಂದು ಮತ್ತೊಂದು ಅರ್ಜಿ ಕೋರ್ಟಿಗೆ ಸಲ್ಲಿಕೆಯಾಗಿದೆ. ಡಿ.26ರಂದು ಸರ್ಜರಿ ಕುರಿತ ಅರ್ಜಿ ವಿಚಾರಣೆಗೆ ಬಂದಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಜಿಲ್ಲಾ ಸರ್ಜನ್ ಹೊರತುಪಡಿಸಿ ಖಾಸಗಿ ವೈದ್ಯರ ಶಿಫಾರಸನ್ನು ಪರಿಗಣಿಸಬಾರದೆಂದು ಆಕ್ಷೇಪ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಈ ಬಗ್ಗೆ ಉಲ್ಲೇಖಿತ ಆದೇಶವಿದ್ದರೆ ಹಾಜರುಪಡಿಸುವಂತೆ ತಿಳಿಸಿದ್ದು, ಸರ್ಕಾರಿ ವಕೀಲರು ಸಮಯಾವಕಾಶ ಕೇಳಿದ್ದಾರೆ. ಈ ಕುರಿತಾಗಿಯೂ ಮುಂದಿನ ವಿಚಾರಣೆಯನ್ನು ಡಿ.30ಕ್ಕೆ ಮುಂದೂಡಲಾಗಿದೆ. ಇದೇ ವೇಳೆ, ಮನೋಹರ್ ಪಿರೇರಾ ಸಾವಿನ ಬಗ್ಗೆ ಬ್ಯಾಂಕಿನ ಅಧಿಕಾರಿಗಳಿಂದ ಪೊಲೀಸರು ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ.