
ಜ.18-22 ರವರೆಗೆ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3
ಮಂಗಳೂರು: ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಜ.18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.
ಜ. 18ರಂದು ಸಂಜೆ ಗಣ್ಯರಿಂದ ಸೀಸನ್-3ಗೆ ಅಧಿಕೃತ ಚಾಲನೆ ದೊರೆಯಲಿದ್ದು, ನಗರದ ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಪ್ರತಿದಿನ ಸಂಜೆ 4ರಿಂದ ರಾತ್ರಿ 10 ರವರೆಗೆ ‘ಆಹಾರೋತ್ಸವ’ ನಡೆಯಲಿದೆ ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಜ. 15 ರಿಂದ 19 ರ ವರೆಗೆ ನಿಗದಿಯಾಗಿದ್ದ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಅಲ್ಪ ಬದಲಾವಣೆಯಾಗಿದ್ದು ಜ. 17ರ ಸಂಜೆ ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭದ್ರತೆ ಹಾಗೂ ಇನ್ನಿತರ ಕಾರಣಗಳಿಗೆ ಜಿಲ್ಲಾಡಳಿತದ ಮನವಿಯಂತೆ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಬದಲಾವಣೆ ಮಾಡಲು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ ಎಂದರು.
ಮನರಂಜನಾ ಕಾರ್ಯಕ್ರಮಗಳು ಇರಲಿದ್ದು, ಮಕ್ಕಳ ಆಟದ ಜೋನ್‌ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಐದೂ ದಿನಗಳಲ್ಲಿ ಏಕಕಾಲಕ್ಕೆ ಹಲವು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾನ್ವಿತರಿಗಾಗಿ ‘ನಮ್ಮ ವೇದಿಕೆ-ನಿಮ್ಮ ಪ್ರತಿಭೆ’, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಅವಕಾಶವಿದೆ. ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಆದ್ಯತೆಯ ಜೊತೆಗೆ ಆಹಾರೋತ್ಸವ ನಡೆಯುವಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಲೇಡಿಹಿಲ್ ಕಾನ್ವೆಂಟ್, ಲೇಡಿಹಿಲ್ ಚರ್ಚ್ ಆವರಣ, ಕರಾವಳಿ ಉತ್ಸವ ಮೈದಾನ, ಉರ್ವ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ಪಾರ್ಕಿಂಗ್ ಮಾಡುವಂತೆ ವಿನಂತಿಸಿದರು.
ಸ್ಟ್ರೀಟ್ ಫುಡ್ ಫಿಯೆಸ್ಟಾಗೆ ಎಲ್ಲ ತಯಾರಿಗಳು ಭರದಿಂದ ಸಾಗಿದ್ದು ಈಗಾಗಲೇ ಆನ್‌ಲೈನ್ ಮೂಲಕ ನೂರಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳು ನೋಂದಾಯಿಕೊಂಡಿವೆ. ಒಟ್ಟು 140 ಸ್ಟಾಲ್‌ಗಳಿಗೆ ಅವಕಾಶವಿದೆ. ಆಸಕ್ತರು ಕೂಡಲೇ ಆನ್‌ಲೈನ್ ಮೂಲಕವೇ ನೋಂದಾಯಿಸಿಕೊಳ್ಳಬಹುದು. ಕಳೆದ ಎರಡು ಆವೃತ್ತಿಗಳ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಲಕ್ಷಾಂತರ ಜನರನ್ನು ಆಕರ್ಷಿಸಿತ್ತು. ಈ ಹಿಂದಿನಂತೆಯೇ ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ವಿಶಿಷ್ಟವಾದ ಕರಾವಳಿ ಖಾದ್ಯ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ. ಈ ಬಾರಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಸ್ಯಾಹಾರಿ ಮತ್ತು ಮಾಂಸಹಾರಿಗಳಿಗೆ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಗಿರಿಧರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪಾಂಡೇಶ್ವರ್, ಪ್ರಮುಖರಾದ ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಉಪಸ್ಥಿತರಿದ್ದರು.