
ಜ.24 ರಿಂದ 26 ರವರೆಗೆ ಬಿಲ್ಲವರ, ಈಡಿಗರು, ತೀಯರ ‘ವಿಶ್ವ ಸಮ್ಮೇಳನ’, ಬೀಚ್ ಫೆಸ್ಟಿವಲ್
ಮಂಗಳೂರು: ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ 2025ರ ಜ. 24ರಿಂದ 26ರವರೆಗೆ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ವಠಾರದಲ್ಲಿ ಬಿಲ್ಲವರ, ಈಡಿಗರು, ತೀಯರ ‘ವಿಶ್ವ ಸಮ್ಮೇಳನ’, ಬೀಚ್ ಫೆಸ್ಟಿವಲ್ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ತಿಳಿಸಿದರು.
ಜ. 24ರಂದು ಸಂಜೆ 4ಕ್ಕೆ ಸಮ್ಮೇಳನ ಪೂರ್ವ ವೈಭವದ ಜಾಥಾ ನಡೆಯಲಿದ್ದು, ಸಾಂಸ್ಕೃತಿಕ ಮೆರವಣಿಗೆ ಹಾಗೂ ಬೀಚ್ ಫೆಸ್ಟಿವಲ್‌ಗೆ ಚಾಲನೆ ನೀಡಲಾಗುತ್ತದೆ. ದೇಶ ವಿದೇಶಗಳಿಂದ ಸಮ್ಮೇಳನಕ್ಕೆ ಆಗಮಿಸುವವರನ್ನು ಸತ್ಕರಿಸುವ ಜತೆ ತುಳುನಾಡು ಹಾಗೂ ಕರುನಾಡಿನ ಜಾನಪದ ಸೊಗಡನ್ನು ಪ್ರದರ್ಶಿಸುವ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜ. 25ರಂದು ಬೆಳಗ್ಗೆ 10.30ಕ್ಕೆ ವಿಶ್ವ ಬಿಲ್ಲವ, ತೀಯಾ, ಆರ್ಯ ಈಡಿಗ, ದೀವರು, ನಾಮಧಾರಿಗಳ ವಿಶ್ವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಂದು ಸಂಜೆ 3 ಗಂಟೆಗೆ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆರಂಭಗೊಳ್ಳಲಿದೆ ಎಂದರು.
ಜ. 26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಮುಂದುವರೆಯಲಿದೆ. ಮಧ್ಯಾಹ್ನ 3.30ರಿಂದ ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ಜರಗಲಿದೆ. ಈ ಸಂದರ್ಭದಲ್ಲಿ ಸಾಧಕರಿಗೆ ಗೌರವ, ಪ್ರಶಸ್ತಿ ಪ್ರದಾನ, ಬಹುಮಾನ ವಿತರಣೆ ನಡೆಯಲಿದೆ ಎಂದರು.
ವಿಶ್ವ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಜಾಗತಿಕವಾಗಿರುವ ಬಿಲ್ಲವರ ವಿವಿಧ ಪಂಗಡಗಳನ್ನು ಜತೆಯಾಗಿಸುವುದು ಸಮ್ಮೇಳನದ ಮುಖ್ಯ ಗುರಿಯಾಗಿದೆ. ಸಾಂಸ್ಕೃತಿಕ ವಿಚಾರಗಳನ್ನು ಪರಿಚಯಿಸುವ ಮೂಲಕ ಸಮ್ಮೇಳನವನ್ನು ಅವಿಸ್ಮರಣೀಯವಾಗಿ ನಡೆಸುವ ಗುರಿಹೊಂದಲಾಗಿದೆ. ಶಾಸಕ ಉಮಾನಾಥ್ ಕೋಟ್ಯಾನ್, ಉದ್ಯಮಿ ಚಂದಯ್ಯ ಬಿ. ಕರ್ಕೇರ ಹಾಗೂ ಮುಡಾದ ಮಾಜಿ ಅಧ್ಯಕ್ಷ ತೇಜೋಮಯ ಸಮ್ಮೇಳನ ಸಮಿತಿ ಗೌರವಾಧ್ಯಕ್ಷರಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಕೇಶವ ಅಂಚನ್, ಚಂದ್ರಶೇಖರ್ ನಾನಿಲ್, ಮಹಾಬಲ ಪೂಜಾರಿ ಕಡಂಬೋಡಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ, ವಿಶ್ವ ಸಮ್ಮೇಳನದ ಗೌರವಾಧ್ಯಕ್ಷ ತೇಜೋಮಯ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಚೇಳಾರು, ಪ್ರಧಾನ ಸಂಚಾಲಕ ನರೇಶ್ ಸಸಿಹಿತ್ಲು, ಕಾರ್ಯದರ್ಶಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.