ಡಿ.8 ರಂದು ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ

ಡಿ.8 ರಂದು ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ


ಮಂಗಳೂರು: ಉರ್ವ ಚರ್ಚ್‌ನಲ್ಲಿರುವ ಪೊಂಪೈ ಮಾತೆಯ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಡಿ.8 ರಂದು ನಡೆಯಲಿದೆ. ಆ ದಿನ ಸಂಜೆ 5.30ಕ್ಕೆ ಮಂಗಳೂರು ಕಥೋಲಿಕ್ ಕ್ರೈಸ್ತ ಧರ್ಮ ಪ್ರ್ಯಾಂತದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಸಂಭ್ರಮಿಕ ಕೃತಜ್ಞತಾ ಪೂಜೆ ನೆರವೇರಿಸಲಿದ್ದಾರೆ.

ವಿಶೇಷ ಅರಾಧನಾ ವಿಧಿಯನ್ನು  ಮಂಗಳ ಜ್ಯೋತಿ ನಿರ್ದೇಶಕ ಫಾ. ವಿಜಯ್ ಮಚಾದೋ ನಡೆಸಿಕೊಡಲಿದ್ದಾರೆ.

ಹಬ್ಬದ ದಿನದ ಇತರ ಕಾರ್ಯಕ್ರಮಗಳಲ್ಲಿ ಬೆಳಗ್ಗೆ 7 ಹಾಗೂ 8.15 ಹಾಗೂ 10.30ಕ್ಕೆ ಪ್ರಾರ್ಥನೆ ಮತ್ತು ಕೃತಜ್ಞತಾ ಪೂಜೆ ನಡೆಯಲಿವೆ. 10.30ಕ್ಕೆ ಆನಾರೋಗ್ಯದಿಂದ ಬಳಲುವವರಿಗೋಸ್ಕರ ಚರ್ಚ್‌ನಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ಈ ಪೂಜೆಯನ್ನು ವಿಗಾರ್ ಜೆರಾಲ್ ಫಾ. ಮ್ಯಾಕ್ಸಿಂ ನೊರೊನ್ಹಾ ಅವರು ನೆರವೇರಿಸಲಿದ್ದಾರೆ.

ಡಿ.7ರಂದು ಕೊಸೆಸಾಂವ್ ಮಾತೆಯ ಹಬ್ಬ ನಡೆಯಲಿದ್ದು, ಸಂಜೆ 5ಕ್ಕೆ ಜಪಮಾಲೆ, 5.30ಕ್ಕೆ ಪೆರ್ಮನ್ನೂರು ಚರ್ಚಿನ ಸಹಾಯಕ ಧರ್ಮಗುರು ಫಾ. ಜಾನ್ಸನ್ ಪಿರೇರಾ ಅವರಿಂದ ಕೃತಜ್ಞತಾ ಪೂಜೆ ಹಾಗೂ ನೊವೆನಾ ನೆರವೇರಿಸಲಿದ್ದಾರೆ. ಹಬ್ಬದ ಪೂರ್ವಭಾವಿಯಾಗಿ ನವದಿನಗಳ ನೊವೆನಾಗಳು ನಡೆದಿದ್ದು ಸಾವಿರಾರು ಭಕ್ತರು ಪ್ರಾರ್ಥನವಿಧಿಯಲ್ಲಿ ಭಾಗವಹಿಸಿದರು ಎಂದು ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಅವರು ತಿಳಿಸಿದ್ದಾರೆ.

ಪೊಂಪೈ ಮಾತೆ ಎಂದರೆ ಯಾರು?:

ಪ್ರಭು ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ. ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಃ ಪರಿವರ್ತನೆಗಾಗಿ 1872ರಲ್ಲಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. 

ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನಃ ಪರಿವರ್ತನೆಯಾಯಿತು ಮತ್ತು ಊರಿಗೆ-ಊರೇ ಸರಿದಾರಿಗೆ ಬಂತು. ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚದಾದ್ಯಂತ ಹಬ್ಬಿತು. ಉರ್ವ ಚರ್ಚ್‌ನಲ್ಲಿ ಪೊಂಪೈಮಾತೆಗಾಗಿ 1895ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮೂಲಕ ಪೊಂಪೈ ಮಾತೆಯ ಭಕ್ತಿ ಆರಂಭವಾಯಿತು. 1995 ರಲ್ಲಿ ಈಗಿರುವ  ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು. ಈ ಪುಣ್ಯಕ್ಷೇತ್ರಕ್ಕೆ ವರ್ಷವಿಡೀ ಭಕ್ತಾದಿಗಳು ಭೇಟಿ ನೀಡಲು ಬರುತ್ತಾರೆ. ತಮ್ಮ ನಾನಾ ಕೋರಿಕೆಗಳಿಗೋಸ್ಕರ ಪ್ರಾರ್ಥಿಸುತ್ತಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article