ಅನೇಕ ಕಡೆಗಳಿಗೆ ಭೇಟಿ ನೀಡಿದ ಡಾ. ಮೋಹನ ಭಾಗವತ್: ಮಾತುಕತೆ, ಬೌದ್ಧಿಕ್ ವರ್ಗ
Sunday, December 8, 2024
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಸರಸಂಘಚಾಲಕ ಡಾ.ಮೋಹನ ಭಾಗವತ್ ಅವರು ದ.ಕ. ಜಿಲ್ಲೆಯಾಧ್ಯಂತ ಪ್ರವಾಸದಲ್ಲಿದ್ದು, ಎರಡನೇ ದಿನವಾದ ಭಾನುವಾರ ಮಂಗಳೂರಿನಲ್ಲಿ ಶಾಖೆಗೆ ಭೇಟಿ, ಮಾತುಕತೆ, ಬೌದ್ಧಿಕ್ ವರ್ಗ ನಡೆಸಿದ್ದು, ರಾತ್ರಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಭಾನುವಾರ ಬೆಳಗ್ಗೆ ನಗರದ ಬೊಳ್ಪುಗುಡ್ಡೆಯಲ್ಲಿ ನಿತ್ಯ ಶಾಖೆಗೆ ಭೇಟಿ ನೀಡಿದರು. ಸುಮಾರು ಒಂದು ಗಂಟೆ ಕಾಲ ಶಾಖಾ ಚಟುವಟಿಕೆಯಲ್ಲಿ ಭಾಗವಹಿಸಿದರು. ನಂತರ ಸ್ವಯಂಸೇವಕರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು. ಬಳಿಕ ಸಂಘನಿಕೇತನಕ್ಕೆ ಆಗಮಿಸಿ ಪ್ರಚಾರಕರ ಜೊತೆ ಅನೌಪಚಾರಿಕ ಭೇಟಿ ಮಾಡಿದರು. ನಂತರ ಸಂಘಪರಿವಾರದ ಪ್ರಮುಖರು ಹಾಗೂ ಆಹ್ವಾನಿತ ಗಣ್ಯರಿಗೆ ಡಾ.ಮೋಹನ ಭಾಗವತ್ ಅವರಿಂದ ಬೌದ್ಧಿಕ್ ನೆರವೇರಿತು.
ಡಾ. ಮೋಹನ ಭಾಗವತ್ ಅವರು ರಾತ್ರಿ ಮಂಗಳೂರಿನಿಂದ ಉಡುಪಿಗೆ ತೆರಳಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಬಳಿಕ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಭೇಟಿ ಮಾಡಿ ಮಾತನಾಡಿದರು.