
ಬಿ.ಸಿ.ರೋಡ್-ಗುಂಡ್ಯ ರಸ್ತೆ ಜೂನ್‌ಗೆ ಸಿದ್ಧ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಮಂಗಳೂರು-ಬೆಂಗಳೂರು ನಡುವಿನ ಬಿ.ಸಿ.ರೋಡ್- ಗುಂಡ್ಯ ಚತುಷ್ಪಥ ಹೆದ್ದಾರಿ ಕಾಮಗಾರಿ 2025ರ ಜೂನ್‌ನಲ್ಲಿ ಪೂರ್ಣಗೊಳಿಸುವುದಾಗಿ ಕೇಂದ್ರ ಸಚಿವರು ಸಂಸತ್ತಲ್ಲಿ ಉತ್ತರ ನೀಡಿದ್ದಾರೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿರಾಡಿ ಪರ್ಯಾಯ ರಸ್ತೆ ಚಿಂತನೆ:
ಶಿರಾಡಿ ಘಾಟ್ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸಾಧ್ಯತೆ ಕುರಿತು ಪ್ರಶ್ನೆ ಕೇಳಿದ್ದು, ಈ ನಿಟ್ಟಿನಲ್ಲಿ ಡಿಪಿಆರ್ ಕೆಲಸ ಆರಂಭವಾಗಿದೆ. ಪಶ್ಚಿಮ ಘಟ್ಟದಲ್ಲಿ ಇನ್ನೊಂದು ಮಾರ್ಗ ನಿರ್ಮಾಣ ಆಗಬೇಕಾದರೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಅನುಮತಿ ಹಾಗೂ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಬೇಕು. ರಾಜ್ಯದ ಒಪ್ಪಿಗೆ ದೊರೆತರೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದರು.
ಅದೇ ರೀತಿ ಕಡಲ್ಕೊರೆತ, ಕೋಸ್ಟ್ ಗಾರ್ಡ್ ಅಕಾಡೆಮಿ, ಮಂಗಳೂರಿನಲ್ಲಿ ಪ್ರೀಮಿಯರ್ ಬ್ಯಾಂಕಿಂಗ್ ಸಂಸ್ಥೆ, ಅಡಕೆ ಎಲೆಚುಕ್ಕೆ ರೋಗ ಮತ್ತು ಹಳದಿ ರೋಗ ಕುರಿತು ಸರ್ಕಾರಿ-ಖಾಸಗಿ ಜಂಟಿ ಅಧ್ಯಯನ ಕುರಿತು ಸಂಬಂಧಿಸಿದ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ಅಡಕೆ ರೋಗಬಾಧಿತ ಪ್ರದೇಶಗಳ ರೈತರಿಗೆ ಅನುಕೂಲವಾಗುವಂತೆ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆಯಬಹುದು ಎಂಬ ಅಧ್ಯಯನ ವರದಿ ಬಂದಿದೆ. ಈ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಪ್ರಮುಖರಾದ ಮೇಯರ್ ಮನೋಜ್ ಕೋಡಿಕಲ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ರಮೇಶ್ ಕಂಡೆಟ್ಟು, ವಸಂತ ಪೂಜಾರಿ ಇದ್ದರು.