ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ: ಕೇಂದ್ರ ಸರಕಾರ ಮಧ್ಯಪ್ರವೇಶಕ್ಕೆ ಆಗ್ರಹ
ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು, ಬಾಂಗ್ಲಾ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು. ಬಾಂಗ್ಲಾದಲ್ಲಿ ಹಿಂದುಗಳಿಗೆ ರಕ್ಷಣೆ ಸಿಗದಿದ್ದರೆ ಭಾರತ ಸರಕಾರ ಸೈನಿಕ ಕಾರ್ಯಾಚರಣೆ ನಡೆಸಿ ಹಿಂದುಗಳಿಗೆ ರಕ್ಷಣೆ ನೀಡಿ, ಬಾಂಗ್ಲಾದೇಶವನ್ನು ಭಾರತಕ್ಕೆ ಸೇರ್ಪಡೆಗೊಳಿಸಬೇಕು ಎಂದು ಅಖಿಲ ಭಾರತೀಯ ಸಂತ ಸಮಿತಿ ಆಗ್ರಹಿಸಿದೆ.
ಭಾರತವು ವಿಶ್ವಗುರು ಸ್ಥಾನಕ್ಕೆ ತಲುಪುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಿಂದು ಸಂಸ್ಕೃತಿ ಹಾಗೂ ಹಿಂದು ಮಠ ಮಂದಿರಗಳ ಮೇಲೆ ದಾಳಿ ನಡೆಸಿ ನಾಶಗೊಳಿಸುವ ಕಾರ್ಯ ಉಗ್ರವಾದಿಗಳಿಂದ ಆಗುತ್ತಿದೆ. ಈ ಷಡ್ಯಂತ್ರದ ಭಾಗವಾಗಿ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ತಡೆಗೆ ಬಾಂಗ್ಲಾ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಾಂಗ್ಲಾದೇಶ ಈ ಹಿಂದೆ ಭಾರತದ ಭಾಗವೇ ಆಗಿತ್ತು. ಹಿಂದುಗಳ ರಕ್ಷಣೆಗೆ ಅನಿವಾರ್ಯವಾದರೆ ಭಾರತ ಸರಕಾರ ಸೈನಿಕ ಕಾರ್ಯಾಚರಣೆ ನಡೆಸಬೇಕು ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಂಗಳೂರಿನ ಓಂ ಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಾಂಗ್ಲಾಕ್ಕೆ ನೆರವು ನೀಡಿದ ಇಸ್ಕಾನ್ನ ಚಿನ್ಮೋಯ್ ಕೃಷ್ಣದಾಸ ಸಹಿತ ಸಂತರನ್ನು ಬಂಧಿಸಿರುವುದು ಖಂಡನೀಯ. ಇಸ್ಕಾನ್ ಸಂಸ್ಥೆ ಎಲ್ಲ ಧರ್ಮೀಯರಿಗೆ ಸಮಾನವಾಗಿ ಸೇವೆ ನಡೆಸಿದೆ. ಇಸ್ಕಾನ್ನ ಸಂತರನ್ನು ಯಾವುದೇ ಕಾರಣವಿಲ್ಲದೆ ಹಿಂಸಿಸುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ಮಠ, ಮಂದಿರ, ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಆತಂಕ ಮೂಡಿಸಿದೆ. ತಲೆತಲಾಂತರದಿಂದ ಅನುಭವಿಸಿಕೊಂಡು ಬಂದ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಳೆದುಕೊಳ್ಳುವ ಸ್ಥಿತಿ ಒದಗಿದೆ. ಸರಕಾರದ ಈ ಕ್ರಮವನ್ನು ಸಂತ ಸಮಿತಿ ಕರ್ನಾಟಕ ವಿರೋಧಿಸುವ ಜತೆಗೆ ಹೋರಾಟ ನಡೆಸಲಿದೆ. ಈ ಬಗ್ಗೆ ಡಿ.12ರಂದು ಬೆಂಗಳೂರಿನಲ್ಲಿ ನಡೆಯುವ ಸಮಿತಿಯ ಸಭೆ ಚರ್ಚೆ ನಡೆಸಲಾಗುವುದು. ಜಿಲ್ಲೆಗೆ ಒಬ್ಬರಂತೆ ಸ್ವಾಮೀಜಿಗಳನ್ನು ನೇಮಿಸಿ, ಮಠ, ಮಂದಿರಗಳ ಆಸ್ತಿ ಆರ್ಟಿಸಿ ಪರಿಶೀಲಿಸಲಾಗುವುದು. ವಕ್ಫ್ ಹೆಸರಿಗೆ ಯಾವುದೇ ಮಠ, ಮಂದಿರ, ರೈತರ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಸರಕಾರ ವಕ್ಫ್ ಕಾಯ್ದೆ ರದ್ದುಗೊಳಿಸಬೇಕು ಎಂದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದೇವೆ. ಬಾಂಗ್ಲಾದ ಪರಿಸ್ಥಿತಿ ನಾಳೆ ನಮ್ಮ ಮನೆ ಬಾಗಿಲಿಗೂ ಬರಬಹುದು. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಏಕೆ ಮೌನ ತಾಳಿವೆ ಎಂದು ಅರ್ಥವಾಗುತ್ತಿಲ್ಲ. ಜಾತ್ಯಾತೀತ ಎಂದು ಹೇಳುತ್ತಿರುವ ಪಕ್ಷಗಳೂ ಬಾಂಗ್ಲಾ ದೌರ್ಜನ್ಯದ ವಿಚಾರದಲ್ಲಿ ಮೌನ ವಹಿಸಿವೆ. ಭಾರತದಲ್ಲಿ ಇಂತಹಾ ಪರಿಸ್ಥಿತಿ ಉಂಟಾದರೆ ನಮಗೆ ಎಷ್ಟು ಬೆಂಬಲ ಸಿಗಬಹುದು ಎಂಬುದು ಇದರಿಂದ ಅರ್ಥವಾಗುತ್ತದೆ. ಈ ವಿಚಾರದಲ್ಲಿ ಸಂತರು ಒಟ್ಟಾಗಿದ್ದೇವೆ. ಬಾಂಗ್ಲಾ ಹಿಂದುಗಳ ರಕ್ಷಣೆಗೆ ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಸಂತ ಸಮಿತಿ ಕೋಶಾಧಿಕಾರಿ ಕಣಿಯೂರಿನ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಕುಶಾಲನಗರದ ರಾಜೇಶ್ ನಾಥ್ ಗುರೂಜಿ, ಓಂ ಶ್ರೀ ಮಠದ ಶಿವಜ್ಞಾನಮಹಿ ಸರಸ್ವತಿ ಉಪಸ್ಥಿತರಿದ್ದರು.